ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸೋಲು: ಟೀಮ್ ಇಂಡಿಯಾ ಫಾರ್ಮ್ ಬಗ್ಗೆ ಕಳವಳ

PC: x.com/Sportskeeda/photo
ಹೊಸದಿಲ್ಲಿ: ಮುಲ್ಲನ್ಪುರದಲ್ಲಿ ಗುರುವಾರ ರಾತ್ರಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ 51 ರನ್ ಗಳ ಸೋಲು ಅನುಭವಿಸಿದ ಬೆನ್ನಲ್ಲೇ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜತೆಗೆ ಭಾರತದ ಬೌಲಿಂಗ್ ಶಿಸ್ತಿನ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ.
ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಅಭಿಪ್ರಾಯಗಳ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಶುಭಮನ್ ಗಿಲ್ & ಸೂರ್ಯಕುಮಾರ್ ಅವರ ಫಾರ್ಮ್? ಇಂದಿನ ಬೌಲಿಂಗ್ ನಲ್ಲಿ 13 ಫುಲ್ಟಾಸ್ ಗಳು. ಇದನ್ನು ಹೇಗೆ ಸಮರ್ಥಿಸುತ್ತೀರಿ? ಈ ಪ್ರಶ್ನೆಗಳಿಗೆ ಟೀಮ್ ಇಂಡಿಯಾ ಉತ್ತರಿಸಬೇಕಿದೆ. ಧನಾತ್ಮಕ ಪರಿಣಾಮದೊಂದಿಗೆ ಅವರು ಉತ್ತರಿಸಲಿ" ಎಂದು ಕುಟುಕಿದ್ದಾರೆ.
ಬ್ಯಾಟಿಂಗ್ ಪಿಚ್ ನಲ್ಲಿ ಗಿಲ್ ಹಾಗೂ ಯಾದವ್ ಮತ್ತೆ ನಿರಾಶಾದಾಯಕ ಪ್ರದರ್ಶನ ತೋರಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಸಿಡಿಸಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಲು ಸಾಧ್ಯವಾಯಿತು. ಭಾರತದ ಅಗ್ರಕ್ರಮಾಂಕದ ಕುಸಿತ ಅಭಿಷೇಕ್ ಶರ್ಮಾ (14) ಅವರನ್ನು ಕಳೆದುಕೊಂಡಲ್ಲಿಂದ ಆರಂಭವಾಯಿತು. ಮೊದಲ ಐದು ಓವರ್ ನಲ್ಲೇ ಗಿಲ್ ಹಾಗೂ ಯಾದವ್ ನಿರ್ಗಮಿಸಿದರು.
ಅಭಿಮಾನಿಗಳು ಗಿಲ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದರು. ಆದರೆ ಲುಂಗಿ ಗಿಡಿಯವರ ಮೊದಲ ಎಸೆತಕ್ಕೇ ವಿಕೆಟ್ ಒಪ್ಪಿಸಿದರು.







