ಶ್ರೀಲಂಕಾ ವಿರುದ್ಧದ ಟಿ20 ಪಂದ್ಯ: ಗಿಲ್ ದಾಖಲೆ ಮುರಿಯಲು ಮಂದಾನಾಗೆ ಅವಕಾಶ!

PC: x.com/Sportskeeda
ಹೊಸದಿಲ್ಲಿ: ಮಂಗಳವಾರ ನಡೆಯುವ ಶ್ರೀಲಂಕಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನಾ 62 ರನ್ ಬಾರಿಸಿದಲ್ಲಿ, ಶುಭಮನ್ ಗಿಲ್ ಅವರ ಅಪರೂಪದ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತದೆ. 2025ರಲ್ಲಿ ಎಲ್ಲ ವಿಧದ ಕ್ರಿಕೆಟ್ ನಲ್ಲಿ 1764 ರನ್ ಗಳಿಸಿದ ದಾಖಲೆ ಗಿಲ್ ಹೆಸರಿನಲ್ಲಿದ್ದು, 1703 ರನ್ ಗಳನ್ನು ಹೊಂದಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿಗೆ ಈ ದಾಖಲೆ ಮುರಿಯಲು ಒಂದು ಪಂದ್ಯದ ಅವಕಾಶವಿದೆ.
ಅದ್ಭುತ ಫಾರ್ಮ್ ನಲ್ಲಿರುವ ಮಂದಾನಾ ವರ್ಷವಿಡೀ ಭಾರತ ಮಹಿಳಾ ತಂಡದ ಯಶಸ್ಸಿನ ಸೂತ್ರಧಾರರೆನಿಸಿದ್ದಾರೆ. ಸರಣಿಯಲ್ಲಿ ಭಾರತ ಈಗಾಗಲೇ 4-0 ಮುನ್ನಡೆಯಲ್ಲಿದ್ದು, ಅಂತಿಮ ಪಂದ್ಯ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸುವ ಉತ್ಸಾಹದಲ್ಲಿದೆ.
ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯಲ್ಲಿ ಮಂದಾನಾ, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಸಿದ ಭಾರತದ ಎರಡನೇ ಹಾಗೂ ಜಾಗತಿಕಮಟ್ಟದಲ್ಲಿ ನಾಲ್ಕನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಿಥಾಲಿ ರಾಜ್, ಸೂಝಿ ಬೇಟ್ಸ್ ಮತ್ತು ಚಾರ್ಲೊಟ್ ಎಡ್ವರ್ಡ್ ಮಾತ್ರ ಈ ಮೊದಲು 10 ಸಾವಿರ ರನ್ ಗಳ ಮೈಲುಗಲ್ಲು ದಾಟಿದ್ದರು.
ಟೆಸ್ಟ್ ಕ್ರಿಕೆಟ್ ನಲ್ಲಿ 12 ಇನ್ನಿಂಗ್ಸ್ ಗಳಲ್ಲಿ 57.18 ಸರಾಸರಿಯಲ್ಲಿ ಎರಡು ಶತಕ ಹಾಗೂ ಅರ್ಧ ಶತಕಗಳ ಸಹಿತ 629 ರನ್ ಗಳಿಸಿರುವ ಮಂದಾನಾ, 117 ಏಕದಿನ ಪಂದ್ಯಗಳಲ್ಲಿ 5322 ರನ್ ಕಲೆಹಾಕಿದ್ದಾರೆ. 14 ಶತಕ ಹಾಗೂ 34 ಅರ್ಧಶತಕ ಗಳಿಸಿರುವ ಅವರು 48.33 ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಲ್ಲೇ ಆರನೇ ಗರಿಷ್ಠ ರನ್ ಗಳಿಸಿದ ಕೀರ್ತಿ ಇವರದ್ದು. ಟಿ20 ಕ್ರಿಕೆಟ್ ನಲ್ಲಿ 157 ಪಂದ್ಯಗಳಿಂದ 4102 ರನ್ ಕಲೆ ಹಾಕಿರುವ ಅವರು 29.94 ಸರಾಸರಿ ಮತ್ತು 124.22 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇವರ ಟಿ20 ಇನ್ನಿಂಗ್ಸ್ ಗಳಲ್ಲಿ ಒಂದು ಶತಕ ಹಾಗೂ 32 ಅರ್ಧಶತಕಗಳು ಸಿಡಿದಿವೆ. ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಇವರ ಹೆಸರಿನಲ್ಲಿದೆ.
ನಾಲ್ಕನೇ ಪಂದ್ಯದಲ್ಲಿ 48 ಎಸೆತಗಳಲ್ಲಿ 11 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ 80 ರನ್ ಗಳಿಸಿದ ಅವರು, ಮಹಿಳಾ ಟಿ20 ಪಂದ್ಯದಲ್ಲಿ ಗರಿಷ್ಠ ಅಂದರೆ 2 ವಿಕೆಟ್ ನಷ್ಟಕ್ಕೆ 221 ರನ್ ಗಳಿಸುವಲ್ಲಿ ಕೊಡುಗೆ ನೀಡಿದ್ದರು. ಶ್ರೀಲಂಕಾವನ್ನು 30 ರನ್ ಅಂತರದಿಂದ ಮಣಿಸಿದ ಭಾರತ 4-0 ಮುನ್ನಡೆ ಗಳಿಸಿತ್ತು.







