ಅಫ್ಘಾನಿಸ್ತಾನ ವಿರುದ್ಧ ಟಿ-20 ಸರಣಿ, ಏಶ್ಯನ್ ಗೇಮ್ಸ್ : ಹರ್ಷಿತ್ ರಾಣಾ ಬದಲಿಗೆ ಯಶ್ ಠಾಕೂರ್ ನೇಮಕ

ಯಶ್ ಠಾಕೂರ್ | Photo Credit : ANI
ಹೊಸದಿಲ್ಲಿ: ಮತ್ತೊಮ್ಮೆ ಗಾಯದ ಸಮಸ್ಯೆಗೆ ತುತ್ತಾಗಿರುವ ಭಾರತ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಮುಂಬರುವ ಅಫ್ಘಾನಿಸ್ತಾನದ ವಿರುದ್ಧದ ಟಿ-20 ಸರಣಿ ಹಾಗೂ 2026ರ ಏಶ್ಯನ್ ಗೇಮ್ಸ್ನಿಂದ ಹೊರಗುಳಿದಿದ್ದಾರೆ. ಎರಡೂ ತಂಡಗಳಿಗೆ ವಿದರ್ಭ ತಂಡದ ವೇಗದ ಬೌಲರ್ ಯಶ್ ಠಾಕೂರ್ ಆಯ್ಕೆಯಾಗಿದ್ದಾರೆ.
ರಾಣಾ ಬೆಂಗಳೂರಿನಲ್ಲಿರುವ ಬಿಸಿಸಿಐನ ಎಕ್ಸಲೆನ್ಸ್ ಸೆಂಟರ್ನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದು, ಸೆ.7ರಂದು ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಆ ನಂತರ ಪುರುಷರ ಆಯ್ಕೆ ಸಮಿತಿಯು ಮುಂಬರುವ ಸರಣಿಗೆ ರಾಣಾರನ್ನು ತಂಡದಿಂದ ಕೈಬಿಟ್ಟಿದೆ.
ಈ ವರ್ಷಾರಂಭದಲ್ಲಿ ಟ್ರೆಂಟ್ಬ್ರಿಡ್ಜ್ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದ ವೇಳೆ ವೇಗದ ಬೌಲರ್ ರಾಣಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. 2026ರ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಅಭ್ಯಾಸ ಪಂದ್ಯಕ್ಕಿಂತ ಮೊದಲು ರಾಣಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ರಾಣಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2026ರ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿದಿದ್ದರು. ರಾಣಾ ಐಪಿಎಲ್ನಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು.
ಗಾಯದಿಂದ ಚೇತರಿಸಿಕೊಂಡ ನಂತರ ರಾಣಾರನ್ನು ಜೂನ್ 20ರಂದು ಚೆನ್ನೈನಲ್ಲಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು.
ಜುಲೈನಲ್ಲಿ ಝಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿದ್ದ 27ರ ವಯಸ್ಸಿನ ಠಾಕೂರ್ ಟಿ-20 ಕ್ರಿಕೆಟಿಗೆ ಕಾಲಿಟ್ಟಿದ್ದರು. ಠಾಕೂರ್ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 50 ಪಂದ್ಯಗಳನ್ನು ಆಡಿದ್ದಾರೆ. 7.04ರ ಇಕಾನಮಿ ರೇಟ್ನಲ್ಲಿ ಒಟ್ಟು 81 ವಿಕೆಟ್ಗಳನ್ನು ಪಡೆದಿದ್ದರು.
ರಾಕೂರ್ ಅವರು ಇದೀಗ ಅಫ್ಘಾನಿಸ್ತಾನ ವಿರುದ್ಧ ಟಿ-20 ಸರಣಿ ಹಾಗೂ ಏಶ್ಯನ್ ಗೇಮ್ಸ್ ಎರಡೂ ತಂಡಗಳ ಭಾಗವಾಗಿದ್ದಾರೆ. ಭಾರತವು ಸೆ.13,15 ಹಾಗೂ 17ರಂದು ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಅಫ್ಘಾನಿಸ್ತಾನ ತಂಡವು ಈ ದ್ವಿಪಕ್ಷೀಯ ಸರಣಿಯ ಆತಿಥ್ಯವಹಿಸಿದ್ದು, ಎಲ್ಲ ಪಂದ್ಯಗಳನ್ನು ದಿಲ್ಲಿಯಲ್ಲಿ ಆಡಲಾಗುತ್ತದೆ.
ಭಾರತದ ಪುರುಷರ ಕ್ರಿಕೆಟ್ ತಂಡವು 2026ರ ಏಶ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ಸೆ.18ರಂದು ದಿಲ್ಲಿಯಿಂದ ನಿರ್ಗಮಿಸಲಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿದ್ದು, ತಿಲಕ್ ವರ್ಮಾ ಉಪ ನಾಯಕನಾಗಿದ್ದಾರೆ.






