ಭಾರತದ ಯುವ ಪಡೆಗೆ ಟಿ20 ಸರಣಿ
20 ರನ್ ಗಳಿಂದ ಆಸ್ಟ್ರೇಲಿಯ ಸೋಲಿಸಿ ಸರಣಿ ಗೆದ್ದ ಭಾರತ ತಂಡ

Photo : x/bcci
ರಾಯ್ಪುರ : ಇಲ್ಲಿನ ಶಹೀದ್ ವೀರ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 20 ರನ್ ಗಳ ಜಯ ಗಳಿಸಿ ಸರಣಿ ತನ್ನದಾಗಿಸಿಕೊಂಡಿತು. ಭಾರತ ನೀಡಿದ 175 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು.
ಭಾರತ ನೀಡಿದ್ದ ಅಲ್ಪ ಮೊತ್ತ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಸ್ಪೋಟಕ ಇನ್ನಿಂಗ್ಸ್ ಆರಂಭ ಪಡೆಯಿತು. 16 ಎಸೆತಗಳಲ್ಲಿ 31 ರನ್ ಗಳಿಸಿದ ಟ್ರಾವೆಸ್ ಹೆಡ್ ಒಂದು ಸಿಕ್ಸರ್, 5 ಬೌಂಡರಿ ಬಾರಿಸಿ ತಂಡವನ್ನು ಬೇಗನೇ ಗುರಿ ತಲುಪಿಸುವ ಮುನ್ಸೂಚನೆ ನೀಡಿದರು. 7 ಎಸೆತ ಎದುರಿಸಿದ ಜೋಸ್ ಪಿಲಿಪ್ 2 ಬೌಂಡರಿಗಳೊಂದಿಗೆ 8 ರನ್ ಗಳಿಸಿ ರವಿ ಬಿಷ್ಣೋಯಿ ಎಸೆತದಲ್ಲಿ 3.1 ನೇ ಓವರ್ ನಲ್ಲಿ ಕ್ಲೀನ್ ಬೌಲ್ಡ್ ಆದಾಗ ಆಸ್ಟ್ರೇಲಿಯಗೆ ಮೊದಲ ಆಘಾತವಾಯಿತು. ಬಳಿಕ 4.4 ನೇ ಓವರ್ ನಲ್ಲಿ ಏಕದಿನ ವಿಶ್ವಕಪ್ ಹೀರೋ ಟ್ರಾವೆಸ್ ಹೆಡ್ ಅಕ್ಸರ್ ಪಟೇಲ್ ಎಸೆತದಲ್ಲಿ ಮುಖೇಶ್ ಕುಮಾರ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದಾಗ ಭಾರತ ತಂಡಕ್ಕೆ ಭರ್ಜರಿ ಭೇಟೆಯಾಡಿದ ಅನುಭವವಾಯಿತು.
ಆ ಬಳಿಕ ಬಂದ ಬ್ಯಾಟರ್ ಗಳು ಭಾರತೀಯ ತಂಡ ಬೌಲರ್ ಗಳ ಪಾರಮ್ಯದೆದುರು ಸೆಟೆದು ನಿಲ್ಲುವ ಪ್ರಯತ್ನ ಮಾಡಲಿಲ್ಲ. ಕೊನೆಯವರೆಗೆ ನಿಂತು ಜವಾಬ್ದಾರಿಯುತ ಆಟವಾಡಿದ ತಂಡನ ನಾಯಕ ಮಾಥ್ಯೂ ವೇಡ್ 23 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ನೊಂದಿಗೆ 36 ರನ್ ಗಳಿಸಿ ಅಜೇಯರಾಗಿ ಉಳಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.
ಟಿಮ್ ಡೇವಿಡ್ 19, ಮಾಟ್ ಶಾರ್ಟ್ 22 ರನ್ ಗಳಿಸಿದರು.
ಭಾರತದ ಪರ ಅಕ್ಸರ್ ಪಟೇಲ್ 4 ಓವರ್ ಗಳಲ್ಲಿ 16 ರನ್ ನೀಡಿ 3 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ರವಿ ಬಿಷ್ಣೋಯಿ 4 ಓವರ್ ಗಳಲ್ಲಿ 17 ರನ್ ನೀಡಿ 1 ವಿಕೆಟ್ ಕಿತ್ತರು. ದೀಪಕ್ ಚಾಹರ್ 4 ಓವರ್ ಗಳಲ್ಲಿ 44 ರನ್ ನೀಡಿ 2 ವಿಕೆಟ್ ಪಡೆದರು. ಆವೇಶ್ ಖಾನ್ 4 ಓವರ್ ಗಳಲ್ಲಿ 33 ರನ್ ನೀಡಿ 1 ವಿಕೆಟ್ ಪಡೆದರು.







