ಟಿ-20 ವಿಶ್ವಕಪ್| ನಮೀಬಿಯಾಕ್ಕೆ ಸೋಲುಣಿಸಿದ ನೆದರ್ಲ್ಯಾಂಡ್ಸ್

Photo Credit : PTI
ಹೊಸದಿಲ್ಲಿ,ಫೆ.10: ಬಾಸ್ ಡಿ ಲೀಡ್ ಆಲ್ರೌಂಡ್ ಆಟದ(ಔಟಾಗದೆ 72 ರನ್, 2-20)ಸಹಾಯದಿಂದ ನೆದರ್ಲ್ಯಾಂಡ್ಸ್ ತಂಡವು ನಮೀಬಿಯಾ ತಂಡವನ್ನು ಏಳು ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.
ಬಾಸ್ ಅವರ ತಂದೆ ಟಿಮ್ ಡಿ ಲೀಡ್ ಕೂಡ ನೆದರ್ಲ್ಯಾಂಡ್ಸ್ ಪರ ಆಡಿದ್ದರು. 2003ರ ಏಕದಿನ ವಿಶ್ವಕಪ್ನಲ್ಲಿ ಸಚಿನ್ ತೆಂಡುಲ್ಕರ್ರನ್ನು ಔಟ್ ಮಾಡಿದ್ದರು.ಇದರೊಂದಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ವಿಕೆಟ್ ಕಬಳಿಸಿದ್ದರು.
ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ತನ್ನ ಆಲ್ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ ಬಾಸ್ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ ತಂಡ ಸ್ಪರ್ಧೆಯಲ್ಲಿರುವಂತೆ ನೋಡಿಕೊಂಡರು.
ಎರಡು ವಿಕೆಟ್ ಪಡೆದು ನಮೀಬಿಯಾ ತಂಡವನ್ನು 8 ವಿಕೆಟ್ಗಳ ನಷ್ಟಕ್ಕೆ 156 ರನ್ಗೆ ನಿಯಂತ್ರಿಸಿದ ಬಾಸ್ ಡಿ ಲೀಡ್ 48 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿ ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ನೆರವಾದರು.
ಡಿ ಲೀಡ್ಗೆ ಕಾಲಿನ್ ಆಕರ್ಮನ್ (32 ರನ್, 28 ಎಸೆತ)ಹಾಗೂ ಆರಂಭಿಕ ಆಟಗಾರ ಮೈಕಲ್ ಲೆವಿಟ್(28 ರನ್, 15 ಎಸೆತ)ಉತ್ತಮ ಸಾಥ್ ನೀಡಿದರು. ಆಕರ್ಮನ್ ಅವರೊಂದಿಗೆ ಮೂರನೇ ವಿಕೆಟ್ಗೆ 70 ರನ್ ಜೊತೆಯಾಟ ನಡೆಸಿದ ಡಿ ಲೀಡ್ ಪಂದ್ಯವನ್ನು ತನ್ನತ್ತ ಸೆಳೆದರು.
ನೆದರ್ಲ್ಯಾಂಡ್ಸ್ನಂತೆಯೇ ನಮೀಬಿಯ ಕೂಡ ಸ್ಪಿನ್ ಬೌಲಿಂಗ್ ಮೂಲಕ ತನ್ನ ದಾಳಿಯನ್ನು ಆರಂಭಿಸಿತು. ಆರಂಭಿಕ ಆಟಗಾರ ಮ್ಯಾಕ್ಸ್ ಡಿ ಡೌಡ್(7 ರನ್)ಹಾಗೂ ಮೈಕಲ್ ಲೆವಿಟ್(28 ರನ್)ವಿಕೆಟ್ಗಳನ್ನು ಬೇಗನೆ ಉರುಳಿಸಿದ ನಮೀಬಿಯಾ ತಂಡ ಆರಂಭಿಕ ಮೇಲುಗೈ ಸಾಧಿಸಿತು.
22ರ ಹರೆಯದ ಲೆವಿಟ್ ಎಡಗೈ ವೇಗಿ ರುಬೆನ್ಗೆ ವಿಕೆಟ್ ಒಪ್ಪಿಸುವ ಮೊದಲು 15 ಎಸೆತಗಳಲ್ಲಿ 28 ರನ್ ಗಳಿಸಿ ಡಚ್ಚರು 50 ರನ್ ಗಳಿಸುವಲ್ಲಿ ನೆರವಾದರು.
13ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಅಕರ್ಮನ್(32 ರನ್, 28 ಎಸೆತ) ಔಟಾದಾಗ ನೆದರ್ಲ್ಯಾಂಡ್ಸ್ ಗೆಲುವಿಗೆ ಇನ್ನೂ 43 ರನ್ಗಳ ಅಗತ್ಯವಿತ್ತು.
ಬಾಸ್ ಡಿ ಲೀಡ್(ಔಟಾಗದೆ 72, 48 ಎಸೆತ, 5 ಬೌಂಡರಿ, 4 ಸಿಕ್ಸರ್)ಹಾಗೂ ನಾಯಕ ಸ್ಕಾಟ್ ಎಡ್ವರ್ಡ್ಸ್(ಔಟಾಗದೆ 18, 9 ಎಸೆತ)ನಾಲ್ಕನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 24 ಎಸೆತಗಳಲ್ಲಿ 43 ರನ್ ಕಲೆ ಹಾಕಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನಮೀಬಿಯಾ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 156 ರನ್ ಕಲೆ ಹಾಕಿತು.
ನಮೀಬಿಯಾ ಮೂರನೇ ಓವರ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆಗ ಎರಡನೇ ವಿಕೆಟ್ಗೆ 50 ರನ್ ಸೇರಿಸಿದ ಜಾನ್ ಫೈಲಿಂಕ್(30 ರನ್, 26 ಎಸೆತ)ಹಾಗೂ ಜಾನ್ ನಿಕೊಲ್ ಲೋಫ್ಟಿ(42 ರನ್, 38 ಎಸೆತ)ತಂಡವನ್ನು ಆಧರಿಸಿದರು.
ಜೆ.ಜೆ.ಸ್ಮಿತ್(22 ರನ್, 15 ಎಸೆತ)ಹಾಗೂ ನಾಯಕ ಗೆರ್ಹಾರ್ಡ್ ಎರಾಸ್ಮಸ್(18 ರನ್, 9 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದ ಪರಿಣಾಮ ನಮೀಬಿಯಾ ತಂಡವು 156 ರನ್ ಕಲೆ ಹಾಕಿತು.
ನೆದರ್ಲ್ಯಾಂಡ್ಸ್ ತಂಡವು ಒಟ್ಟು 8 ಬೌಲರ್ಗಳನ್ನು ಕಣಕ್ಕಿಳಿಸಿದ್ದು, ಈ ಪೈಕಿ ಲೊಗನ್ ವಾನ್ ಬೀಕ್(2-13) ಹಾಗೂ ಬಾಸ್ ಡಿ ಲೀಡ್(2-20)ತಲಾ ಎರಡು ವಿಕೆಟ್ಗಳನ್ನು ಪಡೆದರು.






