2026ರ ಆವೃತ್ತಿಯ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಫೆ.7ರಂದು ಆರಂಭ, ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ

Photo Credit : @BCCI
ಮುಂಬೈ, ನ.25: ಭಾರತ ಹಾಗೂ ಶ್ರೀಲಂಕಾದ ಜಂಟಿ ಆಶ್ರಯದಲ್ಲಿ ನಡೆಯಲಿರುವ 2026ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಫೆಬ್ರವರಿ 7ರಿಂದ ಮಾರ್ಚ್ 8ರ ತನಕ ನಡೆಯಲಿರುವ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ‘ಎ’ಗುಂಪಿನಲ್ಲಿ ಸ್ಥಾನ ಪಡೆದಿವೆ. ಫೆ.15ರಂದು ಕೊಲಂಬೊದಲ್ಲಿ ಗ್ರೂಪ್ ಪಂದ್ಯವನ್ನಾಡಲಿವೆ.
ಪಂದ್ಯಾವಳಿಯು ಭಾರತದ ಐದು ಹಾಗೂ ಶ್ರೀಲಂಕಾ ಮೂರು ಸಹಿತ ಒಟ್ಟು 8 ತಾಣಗಳಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಐದು ತಂಡಗಳಿರುವ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಗ್ರೂಪ್ ಹಂತದ ಪಂದ್ಯಗಳ ನಂತರ ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್-8 ಹಂತದಲ್ಲಿ ಎಂಟು ತಂಡಗಳು ಪರಸ್ಪರ ಸೆಣಸಾಡಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿ ಫೈನಲ್ ಗೆ ಪ್ರವೇಶಿಸಲಿವೆ. ಎರಡು ಶ್ರೇಷ್ಠ ತಂಡಗಳು ಫೈನಲ್ ಗೆ ತಲುಪುತ್ತವೆ.
ಕೊಲಂಬೊದಲ್ಲಿ ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸುವ ಮೂಲಕ ಪಂದ್ಯಾವಳಿಯು ಆರಂಭವಾಗಲಿದೆ. ಆಸ್ಟ್ರೇಲಿಯ-ಒಮಾನ್ ನಡುವೆ ಕೊನೆಯ ಗ್ರೂಪ್ ಪಂದ್ಯ ಕ್ಯಾಂಡಿಯಲ್ಲಿ ನಡೆಯಲಿದೆ.
ಗ್ರೂಪ್ ಹಂತದ ಪಂದ್ಯಗಳು ಫೆಬ್ರವರಿ 7ರಿಂದ 20ರ ತನಕ ನಡೆಯಲಿವೆ. ಸೂಪರ್-8 ಪಂದ್ಯಗಳು ಫೆಬ್ರವರಿ 21ರಿಂದ ಮಾರ್ಚ್ 1ರ ತನಕ ನಡೆಯಲಿದೆ. ಎರಡು ಸೆಮಿ ಫೈನಲ್ಗಳು ಕ್ರಮವಾಗಿ ಮಾ.4 ಹಾಗೂ 5ರಂದು ನಡೆಯಲಿದೆ.
ಫೈನಲ್ ಪಂದ್ಯವು ಮಾರ್ಚ್ 8ರಂದು ಅಹ್ಮದಾಬಾದ್ ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಂಡ ಫೈನಲ್ ಗೆ ತಲುಪಿದರೆ ಫೈನಲ್ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನ ಫೈನಲ್ ಗೆ ಅರ್ಹತೆ ಪಡೆಯದೇ ಇದ್ದರೆ ಫೈನಲ್ ಪಂದ್ಯವು ಅಹ್ಮದಾಬಾದ್ ನಲ್ಲೇ ನಡೆಯುವುದು.
ಪಾಕಿಸ್ತಾನ ಸೆಮಿ ಫೈನಲ್ ಗೆ ತಲುಪದಿದ್ದರೆ, ಸೆಮಿ ಫೈನಲ್ ಪಂದ್ಯಗಳು ಕೋಲ್ಕತಾ ಹಾಗೂ ಮುಂಬೈನಲ್ಲಿ ನಡೆಯಲಿದೆ.
ನಿರೀಕ್ಷೆಯಂತೆಯೇ ಭಾರತ ಹಾಗೂ ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹಾಲಿ ಚಾಂಪಿಯನ್ ಭಾರತ ತಂಡವು ಫೆಬ್ರವರಿ 7 ರಂದು ಅಮೆರಿಕವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಫೆ.15ರಂದು ಪಾಕಿಸ್ತಾನವನ್ನು ಕೊಲಂಬೊದಲ್ಲಿ ಎದುರಿಸಲಿದೆ.
ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯ ತಂಡವು ಬಿ ಗುಂಪಿನಲ್ಲಿ ಐರ್ಲ್ಯಾಂಡ್, ಒಮಾನ್, ಶ್ರೀಲಂಕಾ ಹಾಗೂ ಝಿಂಬಾಬ್ವೆ ತಂಡದೊಂದಿಗೆ ಸ್ಥಾನ ಪಡೆದಿದೆ.







