T20 ವಿಶ್ವಕಪ್ | ಪಾಕಿಸ್ತಾನ ಮೂಲದ ಅಮೆರಿಕದ ವೇಗಿ ಅಲಿ ಖಾನ್ ಗೆ ಭಾರತೀಯ ವೀಸಾ ನಿರಾಕರಣೆ

ಅಲಿ ಖಾನ್ | Photo Credit : X
ಹೊಸದಿಲ್ಲಿ, ಜ.13: ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಮುನ್ನ ಪಾಕಿಸ್ತಾನ ಮೂಲದ ಅಮೆರಿಕ ಕ್ರಿಕೆಟ್ ತಂಡದ ವೇಗದ ಬೌಲರ್ ಅಲಿ ಖಾನ್ ಗೆ ಭಾರತೀಯ ವೀಸಾವನ್ನು ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳಲ್ಲಿ ಅಲಿ ಖಾನ್ ಲಭ್ಯತೆ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.
ಪಾಕಿಸ್ತಾನದ ಪಂಜಾಬ್ ನಲ್ಲಿ ಜನಿಸಿರುವ 35 ವರ್ಷದ ಅಲಿ ಖಾನ್ ಮಂಗಳವಾರ ಇನ್ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಭಾರತದ ವೀಸಾ ಸಿಗಲಿಲ್ಲ, ಆದರೆ ಕೆಎಫ್ಸಿ ಹೃದಯ ಗೆದ್ದಿದೆ’ ಎಂಬ ಬರಹದೊಂದಿಗೆ ತಮ್ಮ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಅಲಿ ಖಾನ್ ಅಮೆರಿಕ ತಂಡದ ಪರ 15 ಏಕದಿನ ಹಾಗೂ 18 ಟಿ-20 ಪಂದ್ಯಗಳನ್ನು ಆಡಿದ್ದು, ಏಕದಿನದಲ್ಲಿ 33 ವಿಕೆಟ್ಗಳು ಹಾಗೂ ಟಿ-20ಯಲ್ಲಿ 16 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರು 2024ರ ಟಿ-20 ವಿಶ್ವಕಪ್ನಲ್ಲಿ ಅಮೆರಿಕ ತಂಡದ ಸದಸ್ಯರಾಗಿದ್ದರು. ಗ್ರೂಪ್ ಹಂತದಲ್ಲಿ ಪಾಕಿಸ್ತಾನವನ್ನು ಸೂಪರ್ ಓವರ್ನಲ್ಲಿ ಸೋಲಿಸಿದ ಅಮೆರಿಕ ತಂಡದಲ್ಲೂ ಅವರು ಇದ್ದರು.
ಒಟ್ಟಾರೆ ಅಲಿ ಖಾನ್ 99 ಟಿ-20 ಪಂದ್ಯಗಳನ್ನು ಆಡಿದ್ದು, 93 ವಿಕೆಟ್ಗಳನ್ನು ಕಬಳಿಸಿದ್ದಾರೆ. ಐಎಲ್ಟಿ-20 ಟೂರ್ನಿಯಲ್ಲಿ ಮೊದಲ ಮೂರು ವರ್ಷಗಳಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು, 2025–26ರ ಋತುವಿನಲ್ಲಿ ಗಲ್ಫ್ ಜಯಂಟ್ಸ್ ಪರ ಆಡಿದ್ದರು.
ಅಮೆರಿಕ ತಂಡವು ಮುಂಬರುವ ಟಿ-20 ವಿಶ್ವಕಪ್ಗೆ ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಆದರೆ ಅಲಿ ಖಾನ್ ಸ್ಥಾನ ಗಿಟ್ಟಿಸುವ ಸ್ಪರ್ಧೆಯಲ್ಲಿದ್ದಾರೆ.
ಟಿ-20 ವಿಶ್ವಕಪ್ ಟೂರ್ನಿಯು ಫೆ.7ರಿಂದ ಮೇ 8ರವರೆಗೆ ಭಾರತದ ಐದು ನಗರಗಳಾದ ಅಹ್ಮದಾಬಾದ್, ದಿಲ್ಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಲ್ಲಿ ನಡೆಯಲಿದೆ. ಶ್ರೀಲಂಕಾದ ಮೂರು ತಾಣಗಳಲ್ಲಿಯೂ ಪಂದ್ಯಗಳು ನಡೆಯಲಿವೆ.
ಅಮೆರಿಕ ತಂಡವು ಭಾರತ, ಪಾಕಿಸ್ತಾನ, ನಮೀಬಿಯಾ ಹಾಗೂ ನೆದರ್ಲ್ಯಾಂಡ್ಸ್ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಫೆ.7ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಫೆ.10ರಂದು ಕೊಲಂಬೊದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಚೆನ್ನೈನಲ್ಲಿ ಫೆ.13 ಮತ್ತು 15ರಂದು ಇನ್ನೆರಡು ಗ್ರೂಪ್ ಪಂದ್ಯಗಳನ್ನು ಆಡಲಿದೆ.







