ಬಾಂಗ್ಲಾದೇಶಕ್ಕೆ ಬೆಂಬಲ: ಟಿ20 ವಿಶ್ವಕಪ್ ಸಿದ್ಧತೆ ಸ್ಥಗಿತಗೊಳಿಸಿದ ಪಾಕಿಸ್ತಾನ

Photo Credit : AP \ PTI
ಕರಾಚಿ: ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆ ಇನ್ನೂ ಅನಿಶ್ಚಿತವಾಗಿರುವ ನಡುವೆಯೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ವಿಶ್ವಕಪ್ ಸಿದ್ಧತೆಯನ್ನು ಸ್ಥಗಿತಗೊಳಿಸಿದೆ. ಭಾರತ ಹಾಗೂ ಶ್ರೀಲಂಕಾದಲ್ಲಿ ಮುಂದಿನ ತಿಂಗಳು ಟೂರ್ನಿ ಆರಂಭವಾಗಲಿದ್ದು, ಬಾಂಗ್ಲಾದೇಶ ಆಡಬೇಕಿರುವ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಬೇಕು ಎಂಬ ಅದರ ಆಗ್ರಹವನ್ನು ಬೆಂಬಲಿಸಿ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.
ವಿಶ್ವಕಪ್ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳುವುದಿಲ್ಲ ಎಂಬ ಬಾಂಗ್ಲಾದೇಶದ ನಿಲುವಿಗೆ ಬೆಂಬಲ ಸೂಚಿಸಿರುವ ಪಿಸಿಬಿ, ತನ್ನ ಸಿದ್ಧತೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ವಿವಾದಕ್ಕೆ ಶೀಘ್ರ ಇತ್ಯರ್ಥವಾಗದಿದ್ದಲ್ಲಿ, ಭಾರತದಲ್ಲಿ ನಡೆಯುವ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಕುರಿತು ಪಾಕಿಸ್ತಾನ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಧಿಕಾರಿಗಳ ನಡುವೆ ನಡೆದ ಮಾತುಕತೆಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟು ಬಾಂಗ್ಲಾದೇಶದ ನಿಲುವನ್ನು ಪಾಕಿಸ್ತಾನ ಸಂಪೂರ್ಣವಾಗಿ ಬೆಂಬಲಿಸಿದೆ. ಈ ಮಾತುಕತೆಯಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಹಾಗೂ ಪಿಸಿಬಿ ಅಧ್ಯಕ್ಷರಾಗಿರುವ ಮೊಹ್ಸಿನ್ ನಕ್ವಿ ಕೂಡ ಭಾಗವಹಿಸಿದ್ದರು.
ಬಾಂಗ್ಲಾದೇಶಕ್ಕೆ ಸಂಬಂಧಿಸಿದ ವಿವಾದಕ್ಕೆ ಪರಿಹಾರ ಕಂಡುಬರದಿದ್ದರೆ, ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಪಾಕಿಸ್ತಾನವೂ ತನ್ನ ನಿಲುವನ್ನು ಮರುಪರಿಶೀಲಿಸಲಿದೆ ಎಂದು ಜಿಯೊ ನ್ಯೂಸ್ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸತ್ತತವಾಗಿ ನಡೆಯುತ್ತಿರುವ ಅನಿಶ್ಚಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬಿಸಿಸಿಐ ಸೂಚನೆಯಂತೆ 2026ರ ಇಂಡಿಯನ್ ಪ್ರಿಮಿಯರ್ ಲೀಗ್ನಿಂದ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ ರಹ್ಮಾನ್ ಹಿಂದೆ ಸರಿದ ನಂತರ ಈ ವಿವಾದ ಆರಂಭವಾಗಿತ್ತು.







