ಟಿ-20 ವಿಶ್ವಕಪ್ನಿಂದ ಹೊರಗುಳಿದ ಝಿಂಬಾಬ್ವೆ ಬ್ಯಾಟರ್ ಬ್ರೆಂಡನ್ ಟೇಲರ್

ಬ್ರೆಂಡನ್ ಟೇಲರ್ | Photo Credit : x \ Zimbabwe Cricket
ಹೊಸದಿಲ್ಲಿ, ಫೆ.13: ಮಂಡಿರಜ್ಜುನೋವಿನಿಂದ ಬಳಲುತ್ತಿರುವ ಹಿರಿಯ ವಿಕೆಟ್ಕೀಪರ್-ಬ್ಯಾಟರ್ ಬ್ರೆಂಡನ್ ಟೇಲರ್ ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಬದಲಿಗೆ ಅಗ್ರ ಸರದಿಯ ಬ್ಯಾಟರ್ ಬೆನ್ ಕರ್ರನ್ ತಂಡವನ್ನು ಸೇರಲಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಝಾ ಶುಕ್ರವಾರ ದೃಢಪಡಿಸಿದರು.
40ರ ಹರೆಯದ ಟೇಲರ್ ಪಂದ್ಯಾವಳಿಯಲ್ಲಿ ಝಿಂಬಾಬ್ವೆ ತಂಡ ಒಮಾನ್ ವಿರುದ್ಧ ಆಡಿರುವ ಮೊದಲ ಪಂದ್ಯದ ವೇಳೆ ಮಂಡಿರಜ್ಜು ನೋವಿಗೆ ಒಳಗಾಗಿದ್ದರು. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದ ನಂತರ ಟೇಲರ್ ಗಾಯಗೊಂಡು ನಿವೃತ್ತಿಯಾಗಿದ್ದರು. ವಿಕೆಟ್ಕೀಪರ್ ಆಗಿ ಮೂರು ಕ್ಯಾಚ್ಗಳನ್ನು ಪಡೆದು ಒಮಾನ್ ತಂಡದ ವಿರುದ್ದ ಜಯ ಸಾಧಿಸಲು ನೆರವಾಗಿದ್ದರು.
ಪಂದ್ಯಾವಳಿಯಲ್ಲಿ ಕನಿಷ್ಠ ಇನ್ನೆರಡು ಪಂದ್ಯಗಳನ್ನು ಆಡಲಿರುವ ಝಿಂಬಾಬ್ವೆ ತಂಡಕ್ಕೆ ಕರ್ರನ್ರನ್ನು ಸೇರಿಸಿಕೊಳ್ಳಲಾಗಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ದಾಖಲಿಸಿರುವ ಕರ್ರನ್ ಈ ತನಕ ಟಿ-20 ಕ್ರಿಕೆಟ್ನಲ್ಲಿ ಸ್ಥಾನ ಪಡೆದಿಲ್ಲ. ಕರ್ರನ್ 40 ಟಿ-20 ಇನಿಂಗ್ಸ್ಗಳಲ್ಲಿ 126.1ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 872 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ತದಿವಾನಶೆ ಮರುಮಾನಿ ವಿಕೆಟ್ಕೀಪಿಂಗ್ ಮಾಡಿದ್ದಾರೆ. ಆಲ್ರೌಂಡರ್ ಟೋನಿ ಮುನ್ಯೊಂಗಾ ಝಿಂಬಾಬ್ವೆ ತಂಡದ ಆಡುವ 11ರ ಬಳಗಕ್ಕೆ ಟೇಲರ್ ಸ್ಥಾನದಲ್ಲಿ ಆಡಿದ್ದಾರೆ.
ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಮೂರೂವರೆ ವರ್ಷ ನಿಷೇಧಕ್ಕೆ ಒಳಗಾಗಿದ್ದ ಟೇಲರ್ 2025ರ ಜುಲೈನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಿದ್ದರು. ಆಗಸ್ಟ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ತಂಡಕ್ಕೆ ಸೇರಿದ್ದರು. ಕ್ರಿಕೆಟಿಗೆ ಮರಳಿದ ನಂತರ ಎರಡು ಏಕದಿನ ಹಾಗೂ 14 ಟಿ-20 ಪಂದ್ಯಗಳನ್ನಾಡಿದ್ದು, ಒಟ್ಟು 282 ರನ್ ಗಳಿಸಿದ್ದಾರೆ.






