ಟಿ20 ವಿಶ್ವಕಪ್| ಅಭಿಷೇಕ್ರನ್ನು ತಂಡದಿಂದ ಕೈಬಿಡುವ ಬಗ್ಗೆ ಚರ್ಚೆ ನಡೆದಿಲ್ಲ: ಕೋಚ್

ಅಭಿಷೇಕ್ ಶರ್ಮಾ | Photo Credit : PTI
ಹೊಸದಿಲ್ಲಿ, ಫೆ. 20: ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಭಾರತೀಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕಳಪೆ ಫಾರ್ಮ್ನಲ್ಲಿದ್ದಾರೆ. ಅವರು ಗುಂಪು ಹಂತದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅವರ ಕಳಪೆ ನಿರ್ವಹಣೆ ಬಗ್ಗೆ ಕಳವಳ ವ್ಯಕ್ತವಾಗಿದ್ದರೂ, ತಂಡಾಡಳಿತವು ಈಗಲೂ ಬಲವಾಗಿ ಅವರ ಬೆಂಬಲಕ್ಕೆ ನಿಂತಿದೆ.
ಅವರನ್ನು ತಂಡದಿಂದ ಕೈಬಿಡುವ ಯಾವುದೇ ಸಾಧ್ಯತೆಯನ್ನು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ ತಳ್ಳಿಹಾಕಿದ್ದಾರೆ. ‘‘ಅಭಿಷೇಕ್ ಶರ್ಮಾ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅವರು ತಂಡ ಮತ್ತು ಪ್ರೇಕ್ಷಕರಿಗಾಗಿ ಉತ್ತಮ ನಿರ್ವಹಣೆ ನೀಡಲಿದ್ದಾರೆ. ಅವರ ಬ್ಯಾಟಿಂಗ್ ನೋಡುವುದೇ ಆನಂದ. ಅವರು ನೆಟ್ನಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ’’ ಎಂದು ಅವರು ಹೇಳಿದರು.
25 ವರ್ಷದ ಬ್ಯಾಟರ್ ಅಭಿಷೇಕ್ ಶರ್ಮಾರ ಮೇಲೆ ಒತ್ತಡವು ಪರಿಣಾಮ ಬೀರುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯಪಡುತ್ತಾರೆ. ಅವರು ಕ್ರೀಸ್ನಲ್ಲಿ ನೆಲೆಯೂರುವ ಬದಲು, ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಹೊಡೆಯಲು ಭಾರೀ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದರು.
‘‘ಅಭಿಷೇಕ್ ಶರ್ಮಾ ಉತ್ತಮ ಆಟಗಾರ. ಆದರೆ, ನಿರೀಕ್ಷೆಗಳ ಭಾರ ಅವರ ಮೇಲಿದೆ. ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭವನ್ನು ಮಾಡಿದ್ದರೆ, ಕತೆಯೇ ಬೇರೆಯಾಗಿರುತ್ತಿತ್ತು. ಈಗ, ದೊಡ್ಡ ಸಿಕ್ಸರ್ ಹೊಡೆತಗಾರ ಹಾಗೂ ಶ್ರೇಷ್ಠ ಬ್ಯಾಟರ್ ಎಂಬ ಒತ್ತಡ ಕಾಣಿಸಿಕೊಳ್ಳುತ್ತಿದೆ’’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟರು.






