T20 ವಿಶ್ವಕಪ್ | ಅಭಿಷೇಕ್ ಶರ್ಮಾ ಮತ್ತೆ ವಿಫಲ; ಸುನೀಲ್ ಗಾವಸ್ಕರ್ ಅಸಮಾಧಾನ

ಅಭಿಷೇಕ್ ಶರ್ಮಾ, ಸುನೀಲ್ ಗಾವಸ್ಕರ್ | Photo Credit : PTI
ಹೊಸದಿಲ್ಲಿ: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಪದೇ ಪದೇ ವಿಫಲರಾಗುತ್ತಿರುವುದರಿಂದ ಭಾರತಕ್ಕೆ ತೊಂದರೆಯಾಗುತ್ತಿದೆ ಎಂದು ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ (ರವಿವಾರ) ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಪ್ರಥಮ ಸೂಪರ್ 8 ಪಂದ್ಯದಲ್ಲಿ ಭಾರತ ತಂಡದ ಸ್ಫೋಟಕ ಬ್ಯಾಟರ್ ಇಶಾನ್ ಕಿಶಾನ್ ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕಮ್ ಬೌಲಿಂಗ್ ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ, ಅಭಿಷೇಕ್ ಶರ್ಮಾ ಭಾರತದ ಇನಿಂಗ್ಸ್ ನ ಮರು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ಮೊದಲ ಬಾಲ್ ನಲ್ಲೇ ಬೌಂಡರಿ ಬಾರಿಸಿದ ಅಭಿಷೇಕ್ ಶರ್ಮ, ಕಗಿಸೊ ರಬಾಡೊ ಬಾಲ್ ಅನ್ನು ಸಿಕ್ಸರ್ ಗೂ ಅಟ್ಟಿದರು. ಆದರೆ, ಕ್ರೀಸಿನಲ್ಲಿದ್ದಷ್ಟೂ ಹೊತ್ತು ಅವರು ಸಹಜವಾಗಿ ಬ್ಯಾಟಿಂಗ್ ಮಾಡಲು ಪರದಾಡಿದರು. ಅಂತಿಮವಾಗಿ ಅವರು ಮ್ಯಾಕ್ರೊ ಜೇಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.
ಹೀಗಾಗಿ, ದಕ್ಷಿಣ ಆಫ್ರಿಕಾ ತಂಡ ಮುಂದೊಡ್ಡಿದ್ದ 188 ರನ್ ಗಳನ್ನು ಬೆನ್ನಟ್ಟಿದ ಭಾರತ ತಂಡ, ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯದಿಂದ 76 ರನ್ ಗಳ ಹೀನಾಯ ಸೋಲು ಅನುಭವಿಸುವಂತಾಯಿತು.
ಈ ಹಿನ್ನೆಲೆಯಲ್ಲಿ ಸುನೀಲ್ ಗಾವಸ್ಕರ್ ಅವರು ಬ್ಯಾಟಿಂಗ್ ಲಯಕ್ಕೆ ಮರಳಲು ಪರದಾಡುತ್ತಿರುವ ಅಭಿಷೇಕ್ ಶರ್ಮಾಗೆ ಒಂದಿಷ್ಟು ಸಲಹೆ ನೀಡಿದ್ದಾರೆ. ನೀವು ಬಯಸಿದಂತೆ ಬ್ಯಾಟಿಂಗ್ ಮಾಡುವ ಮುನ್ನ, ಮೊದಲು ಸಮಯಾವಕಾಶ ತೆಗೆದುಕೊಳ್ಳಿ. ಆರಂಭದಿಂದಲೇ ಬೌಲರ್ ಮೇಲೇರಿ ಹೋಗುವ ನಿನ್ನ ಬಯಕೆಯನ್ನು ಹತ್ತಿಕ್ಕಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಆರಂಭದಿಂದಲೇ ಬೌಲರ್ ಗಳ ಮೇಲೇರಿ ಹೋಗುವ ಅಭಿಷೇಕ್ ಶರ್ಮಗೆ ಅವರ ಆ ಪ್ರವೃತ್ತಿಯೇ ಅವರಿಗೆ ಈವರೆಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಅಲ್ಲದೆ ಅವರನ್ನು ಟಿ-20 ವಿಶ್ವಕಪ್ ರ್ಯಾಂಕಿಂಗ್ ನಲ್ಲಿ ನಂ. 1 ಬ್ಯಾಟರ್ ಆಗಿಸಿತ್ತು. ಆದರೆ, ಕೆಲ ಕಾರಣಗಳಿಂದ ಅವರ ಈ ಪ್ರವೃತ್ತಿ ಫಲದಾಯಕವಾಗುತ್ತಿಲ್ಲ. ಹೀಗಾಗಿ, ನಿಮ್ಮ ಪ್ರವೃತ್ತಿಯನ್ನು ಸರಿಪಡಿಸಿಕೊಂಡು, ಕ್ರೀಸಿಗೆ ಅಂಟಿಕೊಳ್ಳಿ. ಅದರಿಂದ ನಿಮಗೆ ಹಾನಿಯಾಗುವುದಕ್ಕಿಂತ ಹೆಚ್ಚು ಲಾಭವಾಗುತ್ತದೆ ಎಂದು ಸುನೀಲ್ ಗಾವಸ್ಕರ್ ಅವರಿಗೆ ಹಿತನುಡಿ ಹೇಳಿದ್ದಾರೆ.
“ಅಭಿಷೇಕ್ ಶರ್ಮ ಬಳಿ ಇರುವ ಹೊಡೆತದ ವೈವಿಧ್ಯತೆಯ ಕಾರಣಕ್ಕೆ ಅವರು ಮೈದಾನದ ನಡುವೆ ಕೆಲ ಕಾಲ ಕಳೆಯಬೇಕಿದೆ. ಅವರು ಇನಿಂಗ್ಸ್ ನ ಮೊದಲ ಬಾಲ್ ನಿಂದಲೇ ಬೌಂಡರಿ ಅಥವಾ ಸಿಕ್ಸ್ ಹೊಡೆಯಬೇಕಿಲ್ಲ. ದೊಡ್ಡ ಹೊಡೆತಗಳು ಬಂದರೆ ಒಳ್ಳೆಯದು. ಆದರೆ, ಅವರು ಎಲ್ಲ ಮೂಲೆಗಳಲ್ಲೂ ದೊಡ್ಡ ಹೊಡೆತಗಳನ್ನು ಹೊಡೆಯಲು ಮುಂದಾಗಬಾರದು. ಒಂದು ರನ್ ತೆಗೆದುಕೊಂಡು ಆಟದ ಲಯಕ್ಕೆ ಕುದುರಿಕೊಳ್ಳಿ. ನಾಲ್ಕು ಡಾಟ್ ಬಾಲ್ ಗಳೂ ಸಮಸ್ಯೆಯಾಗಲಾರದು. ನಂತರ, ಅವರು ಅದನ್ನು ಸರಿದೂಗಿಸಬಹುದು” ಎಂದು ಅವರು ಸಲಹೆ ನೀಡಿದ್ದಾರೆ.
ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಯುಎಸ್ಎ, ಪಾಕಿಸ್ತಾನ ಹಾಗೂ ನೆದರ್ ಲ್ಯಾಂಡ್ ತಂಡಗಳು ಸೇರಿದಂತೆ ಮೂರು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಸತತ ಶೂನ್ಯ ಸಂಪಾದನೆ ಮಾಡಿದ್ದಾರೆ. ಇದಕ್ಕೂ ಮುನ್ನ ಹೊಟ್ಟೆ ನೋವಿನ ಕಾರಣಕ್ಕೆ ಅವರು ನಮೀಬಿಯಾ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿದಿದ್ದರು.
ಇತ್ತೀಚಿನ ನ್ಯೂಝಿಲೆಂಡ್ ತಂಡದೆದುರಿನ ಟಿ-20 ಸರಣಿ ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ನಾಗಪುರದ ಪಂದ್ಯದಲ್ಲಿ 84 ರನ್, ಗುವಾಹಟಿ ಪಂದ್ಯದಲ್ಲಿ ಅಜೇಯ 68 ರನ್ ಹಾಗೂ ತಿರುವನಂತಪುರಂ ಪಂದ್ಯದಲ್ಲಿ 30 ರನ್ ಗಳಿಸಿದ್ದರು. ಆದರೆ, ರಾಯ್ಪುರ ಮತ್ತು ವಿಶಾಖಪಟ್ಟಣಂನಲ್ಲಿ ನಡೆದಿದ್ದ ಪಂದ್ಯಗಳಲ್ಲಿ ಶೂನ್ಯ ಸಂಪಾದನೆ ಮಾಡಿದ್ದರು.






