ವೆಸ್ಟ್ಇಂಡೀಸ್ ಭರ್ಜರಿ ಗೆಲುವಿನ ಬಳಿಕ ಭಾರತದ ಸೆಮೀಸ್ ಹಾದಿ ಹೇಗೆ?

PC: PTI
ಹೊಸದಿಲ್ಲಿ: ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿದ್ದ ಭಾರತ ತಂಡ ಎರಡನೇ ಹಂತದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ದಿಢೀರ್ ಕುಸಿತ ಕಂಡಿತ್ತು. ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ಜತೆ ಒಂದನೇ ಗುಂಪಿನಲ್ಲಿರುವ ಭಾರತ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇದೇ ಗುಂಪಿನಲ್ಲಿರುವ ವೆಸ್ಟ್ಇಂಡೀಸ್ ತನ್ನ ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 107 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಭಾರತ ನಿವ್ವಳ ರನ್ ರೇಟ್ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ.
ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಭಾರತವನ್ನು ಮಣಿಸಿ ಸರ್ವಾಂಗೀಣ ಪ್ರದರ್ಶನ ತೋರುವ ಮೂಲಕ ಎರಡು ಪ್ರಮುಖ ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಜತೆಗೆ ಭಾರತದ ನಿವ್ವಳ ರನ್ ರೇಟ್ -3.800ಕ್ಕೆ ಇಳಿದಿದೆ. ಇದರಿಂದಾಗಿ ಭಾರತ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಭಾರತ ತಂಡ ವೆಸ್ಟ್ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ನಾಲ್ಕು ಅಂಕಗಳು ಲಭ್ಯವಾಗುತ್ತವೆ. ದಕ್ಷಿಣ ಆಫ್ರಿಕಾ ತನ್ನೆರಡೂ ಉಳಿಕೆ ಪಂದ್ಯಗಳನ್ನು ಗೆದ್ದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆಯಾಗುತ್ತವೆ. ಭಾರತ ಎರಡೂ ಪಂದ್ಯಗಳನ್ನು ಗೆದ್ದು ದಕ್ಷಿಣ ಆಫ್ರಿಕಾ ಒಂದನ್ನು ಸೋತಲ್ಲಿ ಎರಡೂ ತಂಡಗಳು ತಲಾ 4 ಅಂಕ ಪಡೆಯುತ್ತವೆ. ಆಗ ನಿವ್ವಳ ರನ್ ರೇಟ್ ಆಧಾರದಲ್ಲಿ ಅರ್ಹತೆ ನಿರ್ಧರಿಸಲ್ಪಡುತ್ತದೆ.
ಭಾರತ ಎರಡೂ ಪಂದ್ಯ ಗೆದ್ದು, ಆಫ್ರಿಕಾ ತನ್ನೆರಡೂ ಪಂದ್ಯಗಳನ್ನು ಸೋತಲ್ಲಿ ಭಾರತ ಹಾಗೂ ವೆಸ್ಟ್ಇಂಡೀಸ್ ಸೆಮೀಸ್ ತಲುಪುತ್ತವೆ. ಆದರೆ ಭಾರತ ಒಂದು ಪಂದ್ಯ ಸೋತಲೂ ಭಾರತ ಟೂರ್ನಿಯಿಂದ ನಿರ್ಗಮಿಸಬೇಕಾಗುತ್ತದೆ. ಇದರಿಂದಾಗಿ ಭಾರತ ತಂಡ ಯಾವುದೇ ಪ್ರಮಾದ ಎಸಗದೇ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ.






