ಟಿ-20 ವಿಶ್ವಕಪ್ | ಸೋಲಿನ ಹೊಣೆ ತಾನೆೇ ಹೊತ್ತುಕೊಂಡ ವಿಂಡೀಸ್ ನಾಯಕ ಹೋಪ್

ಶಾಯ್ ಹೋಪ್ | Photo Credit : PTI
ಕೋಲ್ಕತಾ, ಮಾ.2: ಟಿ-20 ವಿಶ್ವಕಪ್ನ ಸೂಪರ್-8ರ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಸೋತ ವೆಸ್ಟ್ಇಂಡೀಸ್ ತಂಡವು ಟೂರ್ನಿಯಿಂದ ನಿರ್ಗಮಿಸಿದೆ. ಸೋಲಿನ ಕುರಿತು ಪ್ರತಿಕ್ರಿಯಿಸಿದ ವಿಂಡೀಸ್ ನಾಯಕ ಶಾಯ್ ಹೋಪ್, ಸೋಲಿನ ಹೊಣೆಯನ್ನು ತಾನೇ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದಾಗ ಬೃಹತ್ ಗುರಿ ನೀಡುವ ಜವಾಬ್ದಾರಿ ಇತ್ತು. ಅದರಂತೆ ವಿಂಡೀಸ್ ಬ್ಯಾಟರ್ಗಳು ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಆದರೆ ನಾಯಕ ಹೋಪ್ ಮಾತ್ರ ನಿಧಾನಗತಿಯ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು ಅಗ್ರ ಕ್ರಮಾಂಕದಲ್ಲಿ ನಾನು ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ಸೋಲಿಗೆ ಕಾರಣ ಎಂದಿದ್ದಾರೆ.
ವಿಂಡೀಸ್ ಪರ ಇನಿಂಗ್ಸ್ ಆರಂಭಿಸಿದ ಶಾಯ್ ಹೋಪ್ 33 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಇದರಲ್ಲಿ 17 ಡಾಟ್ಬಾಲ್ಗಳಿದ್ದವು. ಅವರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ವಿಂಡೀಸ್ ತಂಡವು ಅಂತಿಮ ಗುರಿಯಲ್ಲಿ ಕನಿಷ್ಠ 20 ರನ್ ಕೊರತೆ ಅನುಭವಿಸುವಂತಾಯಿತು.
‘‘ಹೌದು ಸೋಲಿನ ಹೊಣೆಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಅಗ್ರ ಕ್ರಮಾಂಕದಲ್ಲಿ ನಾನು ವೇಗವಾಗಿ ಬ್ಯಾಟಿಂಗ್ ಮಾಡಬೇಕಿತ್ತು. ಇನ್ನೂ 20 ರನ್ ಹೆಚ್ಚು ಗಳಿಸಿದ್ದರೆ ಗೆಲುವು ಸಾಧಿಸಬಹುದಿತ್ತು’’ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು.






