ಸಂಜು ಶೋ… ಭಾರತಕ್ಕೆ ಮೂರನೇ ಟಿ20 ವಿಶ್ವಕಪ್

Photo Credit : @ICC
ಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲೆಂಡ್ ಸೋಲಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಆ ಮೂಲಕ ಆತಿಥೇಯರು ವಿಶ್ವಕಪ್ ಗೆಲ್ಲಲ್ಲ ಎಂಬ ಸಂಪ್ರದಾಯಕ್ಕೆ ಅಂತ್ಯ ಹಾಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ನ್ಯೂಝಿಲೆಂಡ್ ತಂಡವು ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ಆರಂಭದಲ್ಲೇ ಕೈಸುಟ್ಟುಕೊಂಡಿತು. ಸಂಜು ಸ್ಯಾಮ್ಸನ್ ಅವರ ಅಬ್ಬರದ ಆಟಕ್ಕೆ ನ್ಯೂಝಿಲೆಂಡ್ ಮಂಕಾಯಿತು.
46 ಎಸೆತ ಎದುರಿಸಿದ ಸಂಜು 89 ರನ್ ಗಳಿಸಿದರು. ಅದರಲ್ಲಿ 8 ಸಿಕ್ಸರ್, 5 ಬೌಂಡರಿ ಸೇರಿದ್ದವು. ಈ ವಿಶ್ವಕಪ್ ನಲ್ಲಿ ಲಯ ಕಳೆದುಕೊಂಡಿದ್ದ ಅಭಿಷೇಕ್ ಶರ್ಮ ಫೈನಲ್ ನಲ್ಲಿ ಅಬ್ಬರಿಸಿದರು. 21 ಎಸೆತದಲ್ಲಿ 52 ರನ್ ಗಳಿಸಿದ ಅವರು 3 ಸಿಕ್ಸರ್ 6 ಬೌಂಡರಿ ಬಾರಿಸಿ ಗಮನ ಸೆಳೆದರು.
ಫೈನಲ್ ನಲ್ಲಿ ಭಾರತ ತಂಡದ ಪರ ಮೂರು ಅರ್ಧ ಶತಕ ದಾಖಲಾದವು. ಮೂರನೇ ಅರ್ಧ ಶತಕವನ್ನು ಭಾರತದ ಪರ ಇಶಾನ್ ಕಿಶನ್ ಬಾರಿಸಿದರು. ಭಾರತದ ಬ್ಯಾಟರ್ ಗಳ ಮಿಂಚಿನ ಆಟಕ್ಕೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ದಾಖಲಾಯಿತು.
256 ರನ್ ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡವು ಆರಂಭದಲ್ಲೇ ಕುಸಿತ ಕಂಡಿತು. 2.4 ಓವರ್ ಗಳಲ್ಲಿ ತಂಡವು 31 ರನ್ ಗಳಿಸಿದ್ದಾಗ ಫಿನ್ ಎಲೆನ್ ಅವರು 9 ರನ್ ಗಳಿಸಿ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ತಿಲಕ್ ವರ್ಮಾಗೆ ಕ್ಯಾಚಿತ್ತರು. ತಂಡವು ಇನ್ನೊಂದು ರನ್ ಸೇರಿಸುವಷ್ಟರಲ್ಲಿ ರಚಿನ್ ರವೀಂದ್ರ ಜಸ್ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರು.
ತಂಡದ ಮೊತ್ತ 50 ದಾಟುವುದರೊಳಗೆ ಮೂರನೇ ವಿಕೆಟ್ ಕೂಡ ಪತನವಾಯಿತು. ಗ್ಲೆನ್ ಪಿಲಿಪ್ಸ್ ಅವರು 4.5 ಓವರ್ ಗಳಲ್ಲಿ ತಂಡವು 47 ರನ್ ಗಳಿಸಿದ್ದಾಗ ಅಕ್ಸರ್ ಪಟೇಲ್ ಗೆ ಕ್ಲೀನ್ ಬೌಲ್ಡ್ ಆದರು. ಪವರ್ ಪ್ಲೇನಲ್ಲಿಯೇ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡ ನ್ಯೂಝಿಲೆಂಡ್ ತಂಡದ ಗೆಲುವಿನ ಹಾದಿ ದುರ್ಗಮವಾಗುವಂತೆ ಕಂಡು ಬಂತು.
ಆಗ ತಂಡದ ನಾಯಕ ಮಿಷೆಲ್ ಸಾಂಟ್ನರ್ ಅವರು ಕ್ರೀಸ್ ನಲ್ಲಿ ನಿಂತು ರಕ್ಷಣಾತ್ಮಕ ಆಟದ ಪ್ರಯತ್ನಕ್ಕೆ ಕೈಹಾಕಿದರು. ಟಿಮ್ ಸೈಫೆರ್ಟ್ 52 ರನ್ ಗಳಿಸಿ ಔಟಾದಾಗ, ಸಾಂಟ್ನರ್ ಏಕಾಂಗಿಯಾದರು. ನಂತರ ಕ್ರೀಸ್ ಬಂದ ಆಟಗಾರರಲ್ಲಿ ಡೆರಿಲ್ ಮಿಷೆಲ್ 17 ರನ್ ಬಿಟ್ಟರೆ ಯಾರೊಬ್ಬರೂ ಒಂದಂಕಿ ರನ್ ದಾಟಲಿಲ್ಲ. ಸಾಂಟ್ನರ್ 43 ರನ್ ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸುವುದರೊಂದಿಗೆ ನ್ಯೂಝಿಲೆಂಡ್ ತಂಡದ ವಿಶ್ವಕಪ್ ಕನಸು ಕಮರಿತು. 19 ಓವರ್ ಗಳಲ್ಲಿ ತಂಡದ ಮೊತ್ತ 159 ರನ್ ಆಗಿದ್ದಾಗ ಜಾಕೊಬ್ ಡಫ್ಫಿ ಅಭಿಷೇಕ್ ಶರ್ಮಾ ಗೆ ಔಟ್ ಆಗುವುದರೊಂದಿಗೆ ನ್ಯೂಝಿಲೆಂಡ್ ಆಲೌಟ್ ಆಯಿತು. ಆ ಮೂಲಕ ಭಾರತ ತಂಡವು 96 ರನ್ ಗಳಿಂದ ಭರ್ಜರಿ ಜಯ ಗಳಿಸಿತು.
ಶಿಸ್ತಿನ ದಾಳಿ ನಡೆಸಿದ ಭಾರತ ತಂಡದ ಬೌಲರ್ ಗಳು ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಜಸ್ಪ್ರೀತ್ ಬುಮ್ರಾ 4, ಅಕ್ಸರ್ ಪಟೇಲ್ 3 ವಿಕೆಟ್ ಪಡೆದರು. ವರುಣ್ ಚಕ್ರವರ್ತಿ , ಅಭಿಷೇಕ್ ಶರ್ಮ, ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಂಜು ಸ್ಯಾಮ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.







