ನಾಳೆ(ಮಾ.8) ಐಸಿಸಿ ಟಿ20 ವಿಶ್ವಕಪ್ ಫೈನಲ್; ಸತತ 2ನೇ ಪ್ರಶಸ್ತಿಯ ಮೇಲೆ ಆತಿಥೇಯರ ಕಣ್ಣು

Photo Credit ; PTI
ಅಹ್ಮದಾಬಾದ್, ಮಾ. 7: 2026ರ ಆವೃತ್ತಿಯ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವು ರವಿವಾರ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಆತಿಥೇಯ ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ.
ಈಗಿನ ಬೃಹತ್ ನರೇಂದ್ರ ಮೋದಿ ಸ್ಟೇಡಿಯಮ್ ತನ್ನ ಹಿಂದಿನ ‘ಮೊಟೆರಾ’ ಅವತಾರದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. 1987ರಲ್ಲಿ ಇದೇ ಮೈದಾನದಲ್ಲಿ ಸುನೀಲ್ ಗವಾಸ್ಕರ್ 10,000 ರನ್ಗಳನ್ನು ಗಳಿಸಿದ ಮೊದಲ ಆಟಗಾರನಾದರು. ಪಾಕಿಸ್ತಾನಿ ಸ್ಪಿನ್ನರ್ ಇಜಾಝ್ ಫಕೀಹ್ ಅವರ ಎಸೆತವನ್ನು ಲೇಟ್ ಕಟ್ ಮಾಡಿ ಅವರು ಇತಿಹಾಸ ನಿರ್ಮಿಸಿದ್ದರು. ಬಳಿಕ 1994ರಲ್ಲಿ ಕಪಿಲ್ ದೇವ್ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಗಳಿಕೆದಾರನಾಗಿ ಹೊರಹೊಮ್ಮಿದರು. ಅವರು ಶ್ರೀಲಂಕಾದ ಹಶನ್ ತಿಲಕರತ್ನೆ ಅವರ ವಿಕೆಟ್ ಉರುಳಿಸಿ ತಮ್ಮ 432ನೇ ವಿಕೆಟ್ ಪಡೆದರು.
ಇದೇ ಮೈದಾನದಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್ ನಡೆದಿತ್ತು. ನವೆಂಬರ್ ರಾತ್ರಿಯೊಂದರಲ್ಲಿ ನಡೆದ ಆ ಪಂದ್ಯದಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿತ್ತು. ಅದು ಕೋಟ್ಯಂತರ ಹೃದಯಗಳನ್ನು ಒಡೆದಿತ್ತು.
ರವಿವಾರ ನಡೆಯಲಿರುವ ಫೈನಲ್ನಲ್ಲಿ ಇತಿಹಾಸವೊಂದನ್ನು ನಿರ್ಮಿಸುವ ಅವಕಾಶ ಭಾರತಕ್ಕಿದೆ. ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತವು ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವ ಮೂಲಕ ಇತಿಹಾಸಕ್ಕೆ ಸೇರ್ಪಡೆಗೊಳ್ಳುವುದನ್ನು ಎದುರು ನೋಡುತ್ತಿದೆ.
ದಕ್ಷಿಣ ಆಫ್ರಿಕ ವಿರುದ್ಧದ ಏಕೈಕ ಸೋಲನ್ನು ಹೊರತುಪಡಿಸಿದರೆ, ಈ ಪಂದ್ಯಾವಳಿಯಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದೆ. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗ ಭಾರತದ ವೇಗಕ್ಕೆ ಹೆಚ್ಚಿನ ಚಾಲನೆ ಒದಗಿಸುತ್ತಿದ್ದಾರೆ.
ಸ್ಯಾಮ್ಸನ್ ಭರವಸೆ ಮತ್ತು ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ತಂಡದ ಬಹುತೇಕ ಎಲ್ಲಾ ಆಟಗಾರರು ಮಿಂಚಿದ್ದು, ತಮ್ಮ ಎರಡನೇ ಪಾತ್ರಗಳಲ್ಲೂ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ವೇಗಿ ಶಿವಮ್ ದುಬೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ ಹಾಗೂ ಸ್ಪಿನ್ನರ್ ಅಕ್ಷರ್ ಪಟೇಲ್ ಅಮೋಘ ಫೀಲ್ಡಿಂಗ್ ಕೌಶಲವನ್ನು ತೋರಿಸುತ್ತಿದ್ದಾರೆ.
ಆದರೆ ಕೆಲವು ಆಟಗಾರರ ನಿರ್ವಹಣೆ ಬಗ್ಗೆ ಚಿಂತೆಯೂ ಇದೆ. ಅಭಿಶೇಕ್ ಶರ್ಮಾ ಈವರೆಗೆ ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ. ವರುಣ್ ಚಕ್ರವರ್ತಿಗೆ ಬೌಲಿಂಗ್ನಲ್ಲಿ ಮೊದಲಿನ ಬಿಗಿತ ಕಾಪಾಡಲು ಸಾಧ್ಯವಾಗುತ್ತಿಲ್ಲ.
ಅದೇ ವೇಳೆ, ನ್ಯೂಝಿಲ್ಯಾಂಡ್ ಬ್ಯಾಟರ್ ಫಿನ್ ಅಲನ್ ದಕ್ಷಿಣ ಆಫ್ರಿಕ ವಿರುದ್ಧದ ಸೆಮಿಫೈನಲ್ನಲ್ಲಿ 33 ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದ್ದಾರೆ. ತಂಡದ ಇನ್ನೋರ್ವ ಬ್ಯಾಟರ್ ಟಿಮ್ ಸೈಫರ್ಟ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಸ್ಪಿನ್ನರ್ ರಚಿನ್ ರವೀಂದ್ರ ಪಂದ್ಯಾವಳಿಯಲ್ಲಿ 11 ವಿಕೆಟ್ಗಳನ್ನು ಪಡೆದು ಮೇಲುಗೈ ಸಾಧಿಸಿದ್ದಾರೆ ಹಾಗೂ ವೇಗಿ ಮ್ಯಾಟ್ ಹೆನ್ರಿ ನಿಖರ ಬೌಲಿಂಗ್ ಮಾಡಿದ್ದಾರೆ.
ಕ್ರಿಕೆಟ್ನ ದೊಡ್ಡ ವೇದಿಕೆಗಳಲ್ಲಿ ಭಾರತವನ್ನು ಕೆಡವಿದ ಇತಿಹಾಸವನ್ನು ಕಿವೀಸ್ಗಳು ಹೊಂದಿದ್ದಾರೆ. ಮ್ಯಾಂಚೆಸ್ಟರ್ನಲ್ಲಿ ನಡೆದ 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಮತ್ತು ಸೌತಾಂಪ್ಟನ್ನಲ್ಲಿ ನಡೆದ 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ಭಾರತೀಯ ಆಶೆಗೆ ತಣ್ಣೀರೆರಚಿತ್ತು.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಶೇಕ್ ಶರ್ಮಾ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಶಿವಮ್ ದುಬೆ, ಇಶಾನ್ ಕಿಶನ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ತಿಲಕ್ ವರ್ಮಾ, ವರುಣ್ ಚಕ್ರವರ್ತಿ, ವಾಶಿಂಗ್ಟನ್ ಸುಂದರ್.
ನ್ಯೂಝಿಲ್ಯಾಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲನ್, ಮಾರ್ಕ್ ಚಾಪ್ಮನ್, ಡೇವನ್ ಕಾನ್ವೇ, ಜಾಕೋಬ್ ಡಫಿ, ಲಾಕೀ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಕೈಲ್ ಜೇಮೀಸನ್, ಕೋಲ್ ಮೆಕೋನ್ಕೀ, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ಸೈಫರ್ಟ್, ಇಶ್ ಸೋದಿ.
ಪಂದ್ಯ ಆರಂಭ: ಸಂಜೆ 7 ಗಂಟೆ
*ಕೆಂಪು, ಕಪ್ಪು ಮಿಶ್ರ ಮಣ್ಣಿನ ಪಿಚ್
ಭಾರತ ಮತ್ತು ನ್ಯೂಝಿಲ್ಯಾಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ‘‘ಮಿಶ್ರ ಮಣ್ಣಿನ’’ ಪಿಚ್ನಲ್ಲಿ ಆಡಲಾಗುವುದು. ಪಂದ್ಯವು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆಯಲಿದೆ.
ಈ ಪಿಚ್ನ ಮಣ್ಣು ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಿಚ್ಗೆ ಬಳಸಲಾದ ಮಣ್ಣಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ ಎಂದು ವರದಿಯೊಂದು ಹೇಳುತ್ತದೆ. ಮುಂಬೈನ ವಾಂಖೇಡೆ ಸ್ಟೇಡಿಯಮ್ನಲ್ಲಿ ನಡೆದ ಭಾರತ–ಇಂಗ್ಲೆಂಡ್ ಸೆಮಿಫೈನಲ್ ಗರಿಷ್ಠ ರನ್ಗಳು ದಾಖಲಾದ ಪಂದ್ಯವಾಗಿತ್ತು. ಸಂಜು ಸ್ಯಾಮ್ಸನ್ ಅವರ 89 ರನ್ಗಳ ನೆರವಿನಿಂದ ಭಾರತ ಏಳು ವಿಕೆಟ್ ಗಳ ನಷ್ಟಕ್ಕೆ 253 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಫೈನಲ್ ಪಂದ್ಯ ನಡೆಯುವ ಅಹ್ಮದಾಬಾದ್ ಪಿಚ್ ಕೂಡ ಬ್ಯಾಟಿಂಗ್ ಪೂರಕ ಎಂಬುದಾಗಿ ವರದಿ ತಿಳಿಸಿದೆ. ಇಲ್ಲಿ ಬೌಲರ್ಗಳಿಗೆ ಹೆಚ್ಚಿನ ತಿರುವು ಸಿಗುವುದಿಲ್ಲ.
ಫೈನಲ್ ಪಂದ್ಯಕ್ಕೆ ಬಳಸಲಾಗುತ್ತದೆ ಎನ್ನಲಾದ ಮಧ್ಯದ ಪಿಚ್ ಅನ್ನು ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ ತಯಾರಿಸಲಾಗಿದೆ. ಆದರೆ ಈ ಮಿಶ್ರಣದಲ್ಲಿ ಕಪ್ಪು ಮಣ್ಣಿಗಿಂತ ಕೆಂಪು ಮಣ್ಣಿನ ಪ್ರಮಾಣ ಹೆಚ್ಚಿದೆ. ಹೆಚ್ಚಿನ ಪ್ರಮಾಣದ ಕೆಂಪು ಮಣ್ಣು ಬ್ಯಾಟರ್ಗಳಿಗೆ ನೆರವು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದು ಬೌಲರ್ಗಳಿಗೆ ಉತ್ತಮ ಬೌನ್ಸ್ ಕೊಡಬಹುದು ಎಂಬ ನಿರೀಕ್ಷೆಯೂ ಇದೆ. ಇಲ್ಲಿ ಗರಿಷ್ಠ ರನ್ 200 ದಾಖಲಾಗಬಹುದು ಎಂಬುದಾಗಿ ಊಹಿಸಲಾಗಿದೆ.
ಈ ಪಿಚ್ನಲ್ಲಿ ಈವರೆಗೆ ಈ ಟಿ20 ವಿಶ್ವಕಪ್ನಲ್ಲಿ ಕೇವಲ ಒಂದು ಪಂದ್ಯ ಆಡಲಾಗಿದೆ. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕವು 213 ರನ್ಗಳನ್ನು ಗಳಿಸಿ ಬಳಿಕ ಕೆನಡಾವನ್ನು ಸೋಲಿಸಿದೆ.
ಈ ವಿಶ್ವಕಪ್ನಲ್ಲಿ ಅಹ್ಮದಾಬಾದ್ನಲ್ಲಿ ನ್ಯೂಝಿಲ್ಯಾಂಡ್ ಒಂದು ಪಂದ್ಯ ಆಡಿದೆ ಹಾಗೂ ಭಾರತ ಎರಡು ಪಂದ್ಯಗಳನ್ನು ಆಡಿದೆ. ಎರಡನೇ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕ ವಿರುದ್ಧ ಸೋಲನುಭವಿಸಿದೆ.







