ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿ: ವೇಳಾಪಟ್ಟಿ ಪ್ರಕಟಿಸಿದ ಪಾಕಿಸ್ತಾನ

Photo: PTI
ಹೊಸದಿಲ್ಲಿ: ಜೂನ್ ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುವ ಸಲುವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಮುಂದಿನ ತಿಂಗಳು ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಅಂತರ್ರಾಷ್ಟ್ರೀಯ ಸರಣಿಯ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.
ಕಿವೀಸ್ ತಂಡ ಎಪ್ರಿಲ್ 14ರಂದು ಇಸ್ಲಾಮಾಬಾದ್ ಗೆ ತೆರಳಲಿದೆ. ಎಪ್ರಿಲ್ 18, 20 ಹಾಗೂ 21ರಂದು ರಾವಲ್ಪಿಂಡಿಯಲ್ಲಿ ಮೂರು ಪಂದ್ಯಗಳನ್ನು ಆಡುವ ಮೂಲಕ ತನ್ನ ಟಿ-20 ಸರಣಿ ಆರಂಭಿಸಲಿದೆ. ಕೊನೆಯ ಎರಡು ಪಂದ್ಯಗಳು ಲಾಹೋರ್ ನಲ್ಲಿ ಎಪ್ರಿಲ್ 25 ಹಾಗೂ 27ರಂದು ನಡೆಯಲಿದೆ.
ಪಿಸಿಬಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ ನ ನಿರ್ದೇಶಕ ಉಸ್ಮಾನ್ ವಹ್ಲಾ ಮುಂಬರುವ ಸರಣಿಯ ಕುರಿತು ಆಶಾವಾದ ವ್ಯಕ್ತಪಡಿಸಿದ್ದು, ಇದೊಂದು ಸ್ಪರ್ಧಾತ್ಮಕ ಸರಣಿಯಾಗುವ ವಿಶ್ವಾಸ ನಮಗಿದೆ. ಇದು ವಿಶ್ವಕಪ್ ತಯಾರಿಗೆ ಮುಖ್ಯವಾಗಿದೆ ಎಂದು ಹೇಳಿದರು.
ವಿಶ್ವಕಪ್ ಕಿಂತ ಮೊದಲು ಪಾಕಿಸ್ತಾನ ತಂಡ ಮೇನಲ್ಲಿ ಐರ್ಲ್ಯಾಂಡ್ ವಿರುದ್ಧ ಎರಡು ಹಾಗೂ ಇಂಗ್ಲೆಂಡ್ ವಿರುದ್ಧ ನಾಲ್ಕು ಟಿ-20 ಪಂದ್ಯಗಳನ್ನು ಆಡಲಿದೆ. ಆ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಅಮೆರಿಕ ಹಾಗೂ ವೆಸ್ಟ್ಇಂಡೀಸ್ ನ ಜಂಟಿ ಆತಿಥ್ಯದಲ್ಲಿ ನಡೆಯುವ ಅಂತರ್ರಾಷ್ಟ್ರೀಯ ಮೆಗಾ ಸ್ಪರ್ಧೆಗೆ ತೆರಳಲಿದೆ.
ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿರುವ ನ್ಯೂಝಿಲ್ಯಾಂಡ್ ತಂಡದಲ್ಲಿ ಹಲವು ಪ್ರಮುಖ ಆಟಗಾರರಾದ ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೆ, ಗ್ಲೆನ್ ಫಿಲಿಪ್ಸ್ ಹಾಗೂ ಲಾಕಿ ಫರ್ಗ್ಯುಸನ್ ಗೈರಾಗಲಿದ್ದಾರೆ. ಇವರೆಲ್ಲರೂ ಐಪಿಎಲ್ ನಲ್ಲಿ ಭಾಗವಹಿಸುತ್ತಿದ್ದಾರೆ.
ವೇಳಾಪಟ್ಟಿ:
ಎಪ್ರಿಲ್ 18: ಮೊದಲ ಟ್ವೆಂಟಿ-20, ರಾವಲ್ಪಿಂಡಿ
ಎಪ್ರಿಲ್ 20: ದ್ವಿತೀಯ ಟ್ವೆಂಟಿ-20, ರಾವಲ್ಪಿಂಡಿ
ಎಪ್ರಿಲ್ 21: ಮೂರನೇ ಟ್ವೆಂಟಿ-20,ರಾವಲ್ಪಿಂಡಿ
ಎಪ್ರಿಲ್ 25: ನಾಲ್ಕನೇ ಟ್ವೆಂಟಿ-20, ಲಾಹೋರ್
ಎಪ್ರಿಲ್ 27: ಐದನೇ ಟ್ವೆಂಟಿ-20, ಲಾಹೋರ್.







