ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್ ಅಮಾನತು : ಆಡಳಿತಾತ್ಮಕ ಲೋಪಗಳನ್ನು ಉಲ್ಲೇಖಿಸಿದ ಕ್ರೀಡಾ ಸಚಿವಾಲಯ

ಸಾಂದರ್ಭಿಕ ಚಿತ್ರ | Photo Credit : magnific.com
ಹೊಸದಿಲ್ಲಿ, ಆ. 12: ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್ (ಟಿಟಿಎಫ್ಐ)ನಲ್ಲಿ ಆಡಳಿತಾತ್ಮಕ ಲೋಪಗಳು ಸಂಭವಿಸಿವೆ ಎಂದು ಆರೋಪಿಸಿರುವ ಕ್ರೀಡಾ ಸಚಿವಾಲಯವು, ಅದಕ್ಕೆ ತಾನು ನೀಡಿರುವ ಮಾನ್ಯತೆಯನ್ನು ಬುಧವಾರ ಅಮಾನತುಗೊಳಿಸಿದೆ. ಅದೇ ವೇಳೆ, ಈ ಕ್ರೀಡೆಯ ಆಡಳಿತವನ್ನು ನೋಡಿಕೊಳ್ಳಲು ಹಂಗಾಮಿ (ಅಡ್-ಹಾಕ್) ಸಮಿತಿಯೊಂದನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಗೆ ಸೂಚಿಸಿದೆ.
ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸಲು ಟಿಟಿಎಫ್ಐ ವಿಫಲವಾಗಿರುವುದನ್ನು ಅಮಾನತಿಗೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಈ ವಿಷಯದಲ್ಲಿ ಈ ವರ್ಷದ ಆರಂಭದಲ್ಲಿ ಕಾರಣ ಕೇಳಿ ನೀಡಲಾಗಿದ್ದ ಶೋಕಾಸ್ ನೋಟಿಸ್ಗೆ ಫೆಡರೇಶನ್ ನೀಡಿರುವ ಉತ್ತರ ಅತೃಪ್ತಿಕರವಾಗಿದೆ ಎಂಬುದಾಗಿ ಭಾವಿಸಿರುವ ಸಚಿವಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಟಿಟಿಎಫ್ಐನಲ್ಲಿ ಸೂಕ್ತವಾದ ಆಡಳಿತ ವ್ಯವಸ್ಥೆಯು ಮರುಸ್ಥಾಪನೆಯಾಗುವವರೆಗೆ, ಹಂಗಾಮಿ ಸಮಿತಿಯ ರಚನೆ ಸೇರಿದಂತೆ ಆಂತರಿಕ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲು ಟೇಬಲ್ ಟೆನಿಸ್ನ ಅಂತರರಾಷ್ಟ್ರೀಯ ಆಡಳಿತ ಮಂಡಳಿ (ಐಟಿಟಿಎಫ್) ಜೊತೆ ಸಮಾಲೋಚಿಸಿ ಐಒಎ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಟಿಟಿಎಫ್ಐನ್ನು ಪ್ರಸ್ತುತ ಮೇಘನಾ ಅಹ್ಲಾವತ್ ಮುನ್ನಡೆಸುತ್ತಿದ್ದಾರೆ. ಅವರು ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದು, ಹರ್ಯಾಣ ಶಾಸಕ ದುಶ್ಯಂತ್ ಚೌಟಾಲ ಅವರ ಪತ್ನಿಯಾಗಿದ್ದಾರೆ. ಚೌಟಾಲ ಅವರು ಟಿಟಿಎಫ್ಐ ಮಾಜಿ ಅಧ್ಯಕ್ಷ ಅಜಯ್ ಸಿಂಗ್ ಚೌಟಾಲ ಅವರ ಪುತ್ರ.
ಅಹ್ಲಾವತ್ ಡಿಸೆಂಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಸಂಸ್ಥೆಯ ಕಾರ್ಯವೈಖರಿಯು ಕಳೆದ ಕೆಲವು ತಿಂಗಳುಗಳಿಂದ ಗೊಂದಲದ ಗೂಡಾಗಿತ್ತು ಎಂಬುದಾಗಿ ಆರೋಪಿಸಲಾಗಿದೆ. ಅದು ಹಣಕಾಸು ಅವ್ಯವಹಾರದ ಆರೋಪದಲ್ಲಿ ತನ್ನ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಆಟಗಾರ ಕಮಲೇಶ್ ಮೆಹ್ತಾರನ್ನು ಜನವರಿಯಲ್ಲಿ ಅಮಾನತುಗೊಳಿಸಿತ್ತು. ಮೆಹ್ತಾ ಈ ವಿಷಯವನ್ನು ದಿಲ್ಲಿ ಹೈಕೋರ್ಟ್ಗೆ ಕೊಂಡೊಯ್ದರಲ್ಲ ಹಾಗೂ ನ್ಯಾಯಾಲಯವು ಅಂತಿಮವಾಗಿ ಅವರ ಅಮಾನತನ್ನು ರದ್ದುಗೊಳಿಸಿತು.
ಅವರ ಅಮಾನತು ಟಿಟಿಎಫ್ಐನಲ್ಲಿನ ಅಧಿಕಾರಕ್ಕಾಗಿನ ಆಂತರಿಕ ಹೋರಾಟದ ಫಲಿತಾಂಶ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿದ ಟಿಟಿಎಫ್ಐ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು, ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆಯನ್ನು ಖಾತರಿಪಡಿಸಲು ಮತ್ತು ಭಾರತೀಯ ಟೇಬಲ್ ಟೆನ್ನಿಸ್ನ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಯುವ ಏಕಯಕ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿತು.
ಕೆಲವು ತಿಂಗಳ ನಂತರ, ಸಾಕಷ್ಟು ದೇಶೀಯ ಪಂದ್ಯಗಳ ಅನುಭವದ ಕೊರತೆಯಿದೆ ಎಂದು ಹೇಳಿ ತಾರಾ ಆಟಗಾರ್ತಿ ಮಣಿಕಾ ಬಾತ್ರಾ ಅವರನ್ನು ಏಶ್ಯನ್ ಗೇಮ್ಸ್ ತಂಡದಿಂದ ಹೊರಗಿಟ್ಟಾಗ ಈ ಸಂಸ್ಥೆಯು ಮತ್ತೆ ಸುದ್ದಿಯಾಗಿತ್ತು.
ಮಣಿಕಾ ಈ ನಿರ್ಧಾರವನ್ನು ಬಹಿರಂಗವಾಗಿ ಖಂಡಿಸಿದರು ಹಾಗೂ ಫೆಡರೇಶನ್ ಅನುಸರಿಸಿದ ಆಯ್ಕೆ ಪ್ರಕ್ರಿಯೆಯು ಅಸ್ಪಷ್ಟ ಮತ್ತು ಅನ್ಯಾಯದಿಂದ ಕೂಡಿತ್ತು ಎಂದು ಆರೋಪಿಸಿದರು ಹಾಗೂ ಈ ವಿಷಯದಲ್ಲಿ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯನ್ನು ಕೋರಿದರು.
ಟಿಟಿಎಫ್ಐಅನ್ನು ಕಾಡುತ್ತಿರುವ ಈ ಎಲ್ಲಾ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡ ಸಚಿವಾಲಯವು ಅದಕ್ಕೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ನೀಡಲಾದ ಉತ್ತರವು ತೃಪ್ತಿಕರವಾಗಿರಲಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.






