ಟೇಬಲ್ ಟೆನಿಸ್ ವಿಶ್ವ ಚಾಂಪಿಯನ್ಶಿಪ್ 2025 | ಮಣಿಕಾ, ಮಾನವ್ಗೆ ಮೊದಲ ಸುತ್ತಿನ ಜಯ
ಅಂಕುರ್ ಭಟ್ಟಾಚಾರ್ಜೀ ನಿರ್ಗಮನ

ಮಣಿಕಾ ಬಾತ್ರಾ | PC : olympics.com
ದೋಹಾ (ಖತರ್): ಖತರ್ನ ದೋಹಾದಲ್ಲಿ ನಡೆಯುತ್ತಿರುವ ಟೇಬಲ್ ಟೆನಿಸ್ ವಿಶ್ವ ಚಾಂಪಿಯನ್ಶಿಪ್ಸ್ ನಲ್ಲಿ ಭಾರತೀಯ ಆಟಗಾರರಾದ ಮಣಿಕಾ ಬಾತ್ರಾ ಮತ್ತು ಮಾನವ್ ಠಕ್ಕರ್ ತಮ್ಮ ಸಿಂಗಲ್ಸ್ ಅಭಿಯಾನಗಳನ್ನು ರವಿವಾರ ವಿಜಯದೊಂದಿಗೆ ಆರಂಭಿಸಿದ್ದಾರೆ. ಅದೇ ವೇಳೆ, ಅಂಕುರ್ ಭಟ್ಟಾಚಾರ್ಜೀ ಪುರುಷರ ಸಿಂಗಲ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಮಹಿಳಾ ಸಿಂಗಲ್ಸ್ನಲ್ಲಿ, ಮಣಿಕಾ ಬಾತ್ರಾ ತನ್ನ ಮೊದಲ ಸುತ್ತಿನ ಪಂದ್ಯವನ್ನು ಅನಾಯಾಸವಾಗಿ ಗೆದ್ದರು. ಅವರು ನೈಜೀರಿಯದ ಫಾತಿಮಾ ಬೆಲ್ಲೊರನ್ನು 23 ನಿಮಿಷಗಳಲ್ಲಿ 11-5, 11-6, 11-8, 11-2 ಗೇಮ್ಗಳಿಂದ ಪರಾಭವಗೊಳಿಸಿದರು.
ಪುರುಷರ ಸಿಂಗಲ್ಸ್ನಲ್ಲಿ, ಮೊದಲ ಸುತ್ತಿನಲ್ಲಿ ಭಾರತದ ಮಾನವ್ ನ್ಯೂಝಿಲ್ಯಾಂಡ್ನ ತಿಮತಿ ಚೋಯ್ರನ್ನು 11-3, 11-8, 6-11, 11-7, 14-12 ಗೇಮ್ಗಳಿಂದ ಮಣಿಸಿದರು.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ, ಭಾರತದ ಅಂಕುರ್ರನ್ನು ಹಾಂಕಾಂಗ್ನ ಲಾಮ್ ಸಿಯು ಹಾಂಗ್ 4-11, 11-7, 11-9, 12-10, 11-8 ಗೇಮ್ಗಳಿಂದ ಪರಾಭವಗೊಳಿಸಿದರು.
►ಮನುಷ್-ದಿಯಾ ಜೊಡಿಗೆ ಜಯ
ಹರ್ಮೀತ್-ಯಶಸ್ವಿನಿ ಜೋಡಿಗೆ ಮೊದಲ ಸುತ್ತಿನಲ್ಲೇ ಸೋಲು
ಟೇಬಲ್ ಟೆನಿಸ್ ವಿಶ್ವ ಚಾಂಪಿಯನ್ಶಿಪ್ಸ್ನ ಮಿಶ್ರ ಡಬಲ್ಸ್ನಲ್ಲಿ ಭಾರತೀಯ ಅಭಿಯಾನ ರವಿವಾರ ಮಿಶ್ರ ಫಲಿತಾಂಶದೊಂದಿಗೆ ಆರಂಭಗೊಂಡಿದೆ.
ಒಂಭತ್ತನೇ ಶ್ರೇಯಾಂಕದ ಜೋಡಿ ಮನುಷ್ ಶಾ ಮತ್ತು ದಿಯಾ ಚಿತಾಳೆ ನೇರ ಸೆಟ್ಗಳ ವಿಜಯ ಸಂಪಾದಿಸಿದರೆ, 14ನೇ ಶ್ರೇಯಾಂಕದ ಜೋಡಿ ಹರ್ಮೀತ್ ದೇಸಯಿ ಮತ್ತು ಯಶಸ್ವಿನಿ ಘೋರ್ಷಡೆ 2-0 ಆರಂಭಿಕ ಮುನ್ನಡೆಯ ಹೊರತಾಗಿಯೂ ಪಂದ್ಯವನ್ನು ಗೆಲ್ಲಲು ವಿಫಲರಾದರು ಹಾಗೂ ಆರಂಭಿಕ ಸುತ್ತಿನಲ್ಲೇ ಹೊರಬಿದ್ದರು.
ಇದೇ ತಿಂಗಳು ಟುನಿಸ್ನಲ್ಲಿ ನಡೆದ ಡಬ್ಲ್ಯುಟಿಟಿ ಕಂಟೆಂಡರ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದಿರುವ ಮನುಷ್ ಮತ್ತು ದಿಯಾ, ದೋಹಾದಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಅಲ್ಜೀರಿಯದ ಮೆಹ್ದಿ ಬುಲೂಸ ಮತ್ತು ಮಲಿಸಾ ನಸ್ರಿ ಜೋಡಿಯನ್ನು ಕೇವಲ 16 ನಿಮಿಷಗಳಲ್ಲಿ 11-2, 11-7, 11-6 ಗೇಮ್ಗಳಿಂದ ಸೋಲಿಸಿದರು.
ಬಳಿಕ, ಹರ್ಮೀತ್ ಮತ್ತು ಯಶಸ್ವಿನಿ ಫ್ರಾನ್ಸ್ನ ಶ್ರೇಯಾಂಕರಹಿತ ಜೋಡಿ ತಿಬೊ ಪೋರೆಟ್ ಮತ್ತು ಲೀನಾ ಹೊಚಾರ್ಟ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಮೊದಲ ಎರಡು ಗೇಮ್ಗಳನ್ನು 11-8, 11-6 ಗೇಮ್ಗಳಿಂದ ಗೆದ್ದರು. ಅದೂ ಅಲ್ಲದೆ, ಭಾರತೀಯ ಜೋಡಿಯು ಮೂರನೇ ಗೇಮ್ ನಲ್ಲಿ 9-6ರ ಮುನ್ನಡೆಯನ್ನೂ ಹೊಂದಿತ್ತು. ಆದರೆ, ತೀವ್ರ ಪ್ರತಿ ಹೋರಾಟ ನೀಡಿದ ಪೊರೆಟ್ ಮತ್ತು ಹೊಚಾರ್ಟ್ ಮುಂದಿನ ಏಳು ಅಂಕಗಳ ಪೈಕಿ ಆರು ಅಂಕಗಳನ್ನು ಗೆದ್ದರು.
ಫ್ರೆಂಚ್ ಜೋಡಿಯು ನಾಲ್ಕನೇ ಗೇಮನ್ನು 11-8ರಿಂದ ಗೆದ್ದಿತು. ಆಗ ಪಂದ್ಯವು ನಿರ್ಣಾಯಕ ಐದನೇ ಗೇಮ್ ನತ್ತ ವಾಲಿತು. ಐದನೇ ಗೇಮ್ ನ ಆರಂಭದಲ್ಲಿ ಹರ್ಮೀತ್ ಮತ್ತು ಯಶಸ್ವಿನಿ 6-2ರ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ನಿಯಂತ್ರಣ ಹೊಂದಿದ್ದರು ಮತ್ತು 10-7ರಲ್ಲಿ ಮೂರು ಮ್ಯಾಚ್ ಪಾಯಿಂಟ್ಗಳನ್ನೂ ಹೊಂದಿದ್ದರು. ಆದರೆ, ಭಾರತೀಯ ಜೋಡಿಯು ಆ ಎಲ್ಲಾ ಮುನ್ನಡೆಯನ್ನು ಬಳಿಕ ಎದುರಾಳಿ ಜೋಡಿಗೆ ಬಿಟ್ಟುಕೊಟ್ಟಿತು. ಆ ಗೇಮನ್ನು ತೀವ್ರ ಪ್ರತಿ ಹೋರಾಟದ ಬಳಿಕ ಫ್ರೆಂಚ್ ಜೋಡಿಯು ಗೆದ್ದಿತು ಹಾಗೂ ಆ ಮೂಲಕ ಪಂದ್ಯವನ್ನೂ ಗೆದ್ದಿತು.
ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲೂ ಹರ್ಮೀತ್ ಸೋಲನುಭವಿಸಿದರು. ಜಿ. ಸತಿಯನ್ರೊಂದಿಗೆ ಆಡಿದ ಅವರು ಆಸ್ಟ್ರೇಲಿಯದ ಮ್ಯಾಸೀಯ್ ಕೊಲೊಝೀಝಿಕ್ ಮತ್ತು ಮೋಲ್ಡೋವದ ವ್ಲಡಿಸ್ಲಾವ್ ಉರ್ಸು ಜೋಡಿಯ ವಿರುದ್ಧ 9-11, 12-10, 14-16, 10-12 ಗೇಮ್ಗಳಿಂದ ಸೋಲನುಭವಿಸಿದರು.







