ತೈವಾನ್ ಅತ್ಲೆಟಿಕ್ಸ್ ಓಪನ್ 2025: ಒಂದೇ ದಿನ ರೋಹಿತ್, ವಿದ್ಯಾ, ಪೂಜಾ ಸಹಿತ ಭಾರತದ 6 ಕ್ರೀಡಾಪಟುಗಳಿಗೆ ಚಿನ್ನ

ಅನ್ನು ರಾಣಿ - Photo : olympics.com
ಹೊಸದಿಲ್ಲಿ: 2025ರ ಆವೃತ್ತಿಯ ತೈವಾನ್ ಅತ್ಲೆಟಿಕ್ಸ್ ಓಪನ್ ಟೂರ್ನಿಯಲ್ಲಿ ಭಾರತವು ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು ರವಿವಾರ ಒಂದೇ ದಿನ 6 ಚಿನ್ನದ ಪದಕಗಳನ್ನು ಜಯಿಸಿದೆ. ಮಹಿಳೆಯರ 800ಮೀ. ಓಟ ಹಾಗೂ ಲಾಂಗ್ಜಂಪ್ ಸ್ಪರ್ಧಾವಳಿಗಳಲ್ಲಿ ಅವಳಿ ಪದಕಗಳನ್ನು ಗೆದ್ದುಕೊಂಡಿದೆ.
ವಿದ್ಯಾ ರಾಮ್ರಾಜ್, ರೋಹಿತ್ ಯಾದವ್, ಪೂಜಾ, ಕೃಷ್ಣ ಕುಮಾರ್ ಹಾಗೂ ಅನ್ನು ರಾಣಿ ತಾವು ಸ್ಪರ್ಧಿಸಿರುವ ಕ್ರೀಡೆಗಳಲ್ಲಿ ಚಿನ್ನದ ಪದಕ ಜಯಿಸಿದರು. ಸಂತೋಷ್ ಟಿ., ವಿಶಾಲ್ ಟಿ.ಕೆ., ಧರ್ಮವೀರ್ ಚೌಧರಿ ಹಾಗೂ ಮನು ಟಿ.ಎಸ್. ಅವರನ್ನೊಳಗೊಂಡ ಪುರುಷರ 4-400 ಮೀ.ರಿಲೇ ತಂಡವು 3:05.58 ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿತು.
ಎರಡನೇ ದಿನವಾದ ರವಿವಾರ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ರೋಹಿತ್ ಯಾದವ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಎರಡು ಬಾರಿಯ ನ್ಯಾಶನಲ್ ಚಾಂಪಿಯನ್ ರೋಹಿತ್ 71.46 ಮೀ.ದೂರಕ್ಕೆ ಜಾವೆಲಿನ್ ಎಸೆದು ಉತ್ತಮ ಆರಂಭ ಪಡೆದರು. ಈ ಆರಂಭದಿಂದಾಗಿ ಮೊದಲ ಸುತ್ತಿನಲ್ಲಿ 2ನೇ ಸ್ಥಾನ ಪಡೆದರು.
ತನ್ನ 2ನೇ ಪ್ರಯತ್ನದಲ್ಲಿ 74.25 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ 24ರ ಹರೆಯದ ರೋಹಿತ್ ಅಗ್ರ ಸ್ಥಾನಕ್ಕೇರಿದರು. ತನ್ನ ಕೊನೆಯ ಪ್ರಯತ್ನದಲ್ಲಿ 74.42 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ ರೋಹಿತ್ ಚಿನ್ನದ ಪದಕ ತನ್ನದಾಗಿಸಿಕೊಂಡರು. ತೈಪೆಯ ಹುವಾಂಗ್ ಶಿ-ಫೆಂಗ್(74.04 ಸೆ.)ಹಾಗೂ ಚೆಂಗ್ ಚಾವೊ-ಸನ್(73.95 ಸೆ.)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.
ಮಹಿಳೆಯರ 400 ಮೀ.ಹರ್ಡಲ್ಸ್ನಲ್ಲಿ ವಿದ್ಯಾ ರಾಮ್ರಾಜ್ 56.53 ಸೆಕೆಂಡ್ನಲ್ಲಿ ಗುರಿ ತಲುಪಿ ಪ್ರಾಬಲ್ಯ ಮೆರೆದರು. ಈ ವರ್ಷ 3ನೇ ಶ್ರೇಷ್ಠ ಸಮಯದಲ್ಲಿ ತಲುಪಿದ ವಿದ್ಯಾ ಅವರು ವಿಶ್ವ ಚಾಂಪಿಯನ್ಶಿಪ್ಗಾಗಿ ಅಮೂಲ್ಯ ರ್ಯಾಂಕಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ. ದ್ವಿದಿನ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡವು 8ನೇ ಚಿನ್ನದ ಪದಕ ಗೆಲ್ಲುವಲ್ಲಿ ನೆರವಾದರು.
ತಮಿಳುನಾಡಿನ ಕ್ರೀಡಾಪಟು ವಿದ್ಯಾ ಅವರು 400 ಮೀ.ಹರ್ಡಲ್ಸ್, 400 ಮೀ.ಓಟ ಹಾಗೂ 4-400 ಮೀ. ರಿಲೇಗಳಲ್ಲಿ ಸ್ಪೆಷಲಿಸ್ಟ್ ಆಗಿದ್ದು, ಫೆಡರೇಶನ್ ಕಪ್ ಫೈನಲ್ನಲ್ಲಿ 56.04 ಸೆಕೆಂಡ್ ಹಾಗೂ ಏಶ್ಯನ್ ಚಾಂಪಿಯನ್ಶಿಪ್ ಫೈನಲ್ನಲ್ಲಿ 56.46 ಸೆಕೆಂಡ್ನಲ್ಲಿ ಗುರಿ ತಲುಪಿದ್ದರು.
ಇದೇ ವೇಳೆ, ಪುರುಷರ 400 ಮೀ. ಹರ್ಡಲ್ಸ್ನಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ(42.22 ಸೆಕೆಂಡ್) ಗುರಿ ತಲುಪಿದ ಯಶಸ್ ಪಾಲಾಕ್ಷಾ ಬೆಳ್ಳಿ ಪದಕ ಜಯಿಸಿದರು.
ಮಹಿಳೆಯರ 800 ಮೀ. ಓಟದ ಸ್ಪರ್ಧೆಯಲ್ಲಿ ಕೂಡ ಭಾರತವು ಪ್ರಾಬಲ್ಯ ಮೆರೆದಿದೆ. ಪೂಜಾ(2:02.79 ಸೆಕೆಂಡ್) ಚಾಂಪಿಯನ್ಶಿಪ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರೆ, ಟ್ವಿಂಕಲ್ ಚೌಧರಿ(2:06.96 ಸೆಕೆಂಡ್) ಬೆಳ್ಳಿ ಪದಕ ಜಯಿಸಿದರು.
1,500 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿದ್ದ ಪೂಜಾ ಪ್ರಸಕ್ತ ಚಾಂಪಿಯನ್ಶಿಪ್ನಲ್ಲಿ 2ನೇ ಚಿನ್ನದ ಪದಕ ತನ್ನದಾಗಿಸಿಕೊಂಡರು.
ಪುರುಷರ 800 ಮೀ. ಓಟದಲ್ಲಿ 1:48.46 ಸೆಕೆಂಡ್ನಲ್ಲಿ ಗುರಿ ತಲುಪಿದ ಕೃಷ್ಣ ಕುಮಾರ್ ಚಾಂಪಿಯನ್ಶಿಪ್ ದಾಖಲೆಯೊಂದಿಗೆ ಭಾರತಕ್ಕೆ 10ನೇ ಚಿನ್ನದ ಪದಕ ಗೆದ್ದುಕೊಟ್ಟರು.
ಅನ್ನು ರಾಣಿ ಮಹಿಳೆಯರ ಜಾವೆಲಿನ್ ಸ್ಪರ್ಧೆಯಲ್ಲಿ 56.82 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ಶ್ರೀಲಂಕಾದ ಲೆಕಮಲಗೆ(56.82 ಮೀ.)ಹಾಗೂ ತೈಪೆಯ ಪಿನ್-ಸನ್ ಚು(53.03 ಮೀ.)2ನೇ ಹಾಗೂ 3ನೇ ಸ್ಥಾನ ಪಡೆದರು.
ಮಹಿಳೆಯರ ಲಾಂಗ್ಜಂಪ್ನಲ್ಲಿ ಭಾರತದ ಶೈಲಿ ಸಿಂಗ್(6.41 ಮೀ.)ಹಾಗೂ ಆನ್ಸಿ ಸೋಜನ್(6.39 ಮೀ.)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಆಸ್ಟ್ರೇಲಿಯದ ಡೆಲ್ಟಾ ಅಮಿಡ್ರೆವಿಸ್ಕಿ (6.49 ಮೀ.)ಚಿನ್ನದ ಪದಕ ಜಯಿಸಿದರು.







