Tamil Nadu | ಸಾಮಾಜಿಕ ನ್ಯಾಯ ಇಲಾಖೆಯಿಂದ ಕಿರುಕುಳ: ದಲಿತ ಪಿಎಚ್ಡಿ ವಿದ್ಯಾರ್ಥಿ ಆರೋಪ

ಭಾರತಿದಾಸನ್ | Photo Credit : NDTV
ಚೆನ್ನೈ: ಸರಕಾರದ ಧನಸಹಾಯದೊಂದಿಗೆ ಮಲೇಷ್ಯಾದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ವಿದ್ಯಾರ್ಥಿ ಭಾರತಿದಾಸನ್, ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆಯು ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ. ಮೊದಲ ವರ್ಷದ ಖರ್ಚು-ವೆಚ್ಚಗಳ ವಿವರಗಳನ್ನು ಮತ್ತು ವಿವಿ ದಾಖಲೆಗಳನ್ನು ಸಲ್ಲಿಸಿದ್ದರೂ, ಎರಡನೇ ವರ್ಷದ ಅನುದಾನ ಸರಿಯಾದ ಸಮಯಕ್ಕೆ ಬಿಡುಗಡೆಯಾಗದ ಕಾರಣ ತನ್ನ ಶೈಕ್ಷಣಿಕ ಭವಿಷ್ಯವು ಅಪಾಯದಲ್ಲಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ವೀಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮಲೇಷ್ಯಾದ ಯೂನಿವರ್ಸಿಟಿ ಕೆಬಾಂಗ್ಸಾನ್ನಲ್ಲಿ ಟಿಶ್ಯೂ ಇಂಜಿನಿಯರಿಂಗ್ ಮತ್ತು ರಿಜನರೇಟಿವ್ ಮೆಡಿಸಿನ್ನಲ್ಲಿ ಪಿಎಚ್ಡಿ ಮಾಡುತ್ತಿರುವ ಭಾರತಿದಾಸನ್, ತನಗೆ ರೋಹಿತ್ ವೇಮುಲಾರಂತೆ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಹೈದರಾಬಾದ್ ವಿವಿಯ ಪಿಎಚ್ಡಿ ವಿದ್ಯಾರ್ಥಿ ವೇಮುಲ ಕಿರುಕುಳವನ್ನು ಆರೋಪಿಸಿ 2016, ಜ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ನಿಧಿ ಬಿಡುಗಡೆ ವಿಳಂಬವಾದರೆ ವಿವಿಯು ತನ್ನನ್ನು ಹೊರಹಾಕಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಭಾರತಿದಾಸನ್, ಈ ಮಾನಸಿಕ ಯಾತನೆ ಮುಂದುವರಿದರೆ ಭಾರತದಲ್ಲಿ ಅಥವಾ ಬೇರೆ ಎಲ್ಲಿಯಾದರೂ ವಿದ್ಯಾಭ್ಯಾಸ ಮುಂದುವರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಭಾರತಿದಾಸನ್ ಆರೋಪಗಳು ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ವಿದ್ಯಾರ್ಥಿಯ ಪರವಾಗಿ ನಿಂತಿದ್ದಾರೆ. ಸರಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ಮುಖ್ಯಮಂತ್ರಿ ವಿಜಯ್ ಅವರನ್ನು ಆಗ್ರಹಿಸಿರುವ ಅವರು, ವಿದ್ಯಾರ್ಥಿಗೆ ಬೇಕಾದ ಅನುದಾನವನ್ನು ಸರಕಾರವು ನೀಡಲು ಸಾಧ್ಯವಾಗದಿದ್ದರೆ ತಮಿಳುನಾಡು ಜನತೆ ಮತ್ತು ಡಿಎಂಕೆ ಪಕ್ಷವೇ ಅವರ ಶಿಕ್ಷಣದ ಶುಲ್ಕವನ್ನು ಭರಿಸಿ ಓದಿಸುವುದಾಗಿ ಘೋಷಿಸಿದ್ದಾರೆ.
ವಿದ್ಯಾರ್ಥಿಯ ಆರೋಪಗಳನ್ನು ತಮಿಳುನಾಡು ಸರಕಾರವು ಬಲವಾಗಿ ತಳ್ಳಿಹಾಕಿದ್ದು, ಇದು ರಾಜ್ಯ ಸರಕಾರದ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ ಎಂದು ಸಾಮಾಜಿಕ ನ್ಯಾಯ ಸಚಿವ ವಣ್ಣಿ ಅರಸು ಕಿಡಿಕಾರಿದ್ದಾರೆ.
ಸಾಮಾಜಿಕ ನ್ಯಾಯ ಇಲಾಖೆಯು ಬಿಡುಗಡೆ ಮಾಡಿರುವ ವಿವರವಾದ ಹೇಳಿಕೆಯ ಪ್ರಕಾರ, ‘ಅಣ್ಣಲ್ ಅಂಬೇಡ್ಕರ್ ಸಾಗರೋತ್ತರ ಶಿಕ್ಷಣವೇತನ’ ಯೋಜನೆಯಡಿ ಭಾರತಿದಾಸನ್ ಅವರಿಗೆ ಮೂರು ವರ್ಷಗಳ ಕಾಲ ವಾರ್ಷಿಕ 36 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವಿಗೆ ಮಂಜೂರಾತಿ ನೀಡಲಾಗಿದೆ. 2025-26ರ ಮೊದಲ ವರ್ಷಕ್ಕೆ ಪೂರ್ಣ 36 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಹಾಗೂ 2026-27ರ ಎರಡನೇ ವರ್ಷಕ್ಕೆ ಈಗಾಗಲೇ 12 ಲಕ್ಷ ರೂ.ಗಳನ್ನು ವಿವಿ ಶುಲ್ಕ ಮತ್ತು ಜೀವನ ವೆಚ್ಚಕ್ಕಾಗಿ ನೀಡಲಾಗಿದೆ. ಆದರೆ ಎರಡನೇ ವರ್ಷದ ಸಂಶೋಧನಾ ವೆಚ್ಚಕ್ಕಾಗಿ ಹೆಚ್ಚುವರಿಯಾಗಿ ಬೇಡಿಕೆ ಇಟ್ಟಿರುವ 19.50 ಲಕ್ಷ ರೂ.ಗಳ ಬಿಡುಗಡೆಯ ಬಗ್ಗೆ ವಿವಾದ ಉದ್ಭವಿಸಿದೆ.
ಭಾರತಿದಾಸನ್ ಸಲ್ಲಿಸಿರುವ ವೆಚ್ಚದ ಪ್ರಸ್ತಾವಗಳನ್ನು ಅವರ ವಿವಿಯು ಶಿಫಾರಸು ಮಾಡಿಲ್ಲ ಎಂದು ಸರಕಾರವು ಹೇಳಿದೆ. ಅಲ್ಲದೆ ಮೊದಲ ವರ್ಷದ 8.18 ಲಕ್ಷ ರೂ.ಗಳ ಮೌಲ್ಯದ ಸಂಶೋಧನಾ ಸಾಮಗ್ರಿಗಳ ಬಿಲ್ ಮತ್ತು ಪಾವತಿ ದಾಖಲೆಗಳ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಎತ್ತಲಾಗಿದ್ದು, ಈ ಬಗ್ಗೆ ಸ್ಪಷ್ಟತೆಯ ಅಗತ್ಯವಿದೆ ಎಂದು ಅದು ತಿಳಿಸಿದೆ. ಮಲೇಷ್ಯಾ ವಿವಿಯಿಂದ ಅಗತ್ಯ ಶಿಫಾರಸು ದೊರೆತ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಸರಕಾರವು ಸ್ಪಷ್ಟಪಡಿಸಿದೆ.






