ಟಾಟಾ ಸ್ಟೀಲ್ ಚೆಸ್: ಎರಿಗೈಸಿಗೆ ಮತ್ತೊಂದು ಅಚ್ಚರಿಯ ಸೋಲು

PC: x.com/chesscom_in
ಹೊಸದಿಲ್ಲಿ: ಭಾರತದ ನಂಬರ್ ವನ್ ಆಟಗಾರ ಅರ್ಜುನ್ ಎರಿಗೈಸಿ ಅವರು ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿ-2025ರಲ್ಲಿ ಮಂಗಳವಾರ ಮತ್ತೊಂದು ಅಚ್ಚರಿಯ ಸೋಲು ಅನುಭವಿಸಿದರು. ನಾಲ್ಕು ಸುತ್ತುಗಳ ಪೈಕಿ ಮೂರು ಸೋಲು ಕಂಡಿರುವ ಎರಿಗೈಸಿ ಇದೀಗ ಕೇವಲ 0.5 ಅಂಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದು, ಲಿಯಾನ್ ಲೂಕ್ ಮೆಂಡೋನ್ಸಾ ಜತೆಗೆ ಕೊನೆಯ ಸ್ಥಾನದಲ್ಲಿದ್ದಾರೆ.
ರಷ್ಯಾದ ವ್ಲಾದಿಮಿರ್ ಫೆಡೊಸೀವ್ ವಿರುದ್ಧದ ಪಂದ್ಯದಲ್ಲಿ ಬಿಳಿಕಾಯಿಗಳೊಂದಿಗೆ ಆಡಿದ ಅರ್ಜುನ್, ಶಾಸ್ತ್ರೀಯ ವಿಧಾನದಲ್ಲಿ ಕ್ಯೂಜಿಡಿ (ಕ್ವೀನ್ಸ್ ಗಂಬಿಟ್ ಡಿಕ್ಲೈನ್ಡ್) ಮೂಲಕ ಆಟ ಆರಂಭಿಸಿದರು. ಪ್ರಬಲ ಆರಂಭದ ಹೊರತಾಗಿಯೂ 15ನೇ ನಡೆಯಲ್ಲಿ ಎಸಗಿದ ಪ್ರಮಾದದಿಂದಾಗಿ ಆಟದ ಲಯ ಕಳೆದುಕೊಂಡರು. 39ನೇ ನಡೆಯ ಬಳಿಕ ಆಟ ಮುಗಿಯಲು 10 ನಿಮಿಷ ಇದ್ದಾಗ ಅರ್ಜುನ್ ಸೋಲೊಪ್ಪಿಕೊಂಡರು.
ಅರ್ಜುನ್ ಅವರ ಸತತ ಸೋಲಿನ ಕಾರಣದಿಂದ ಪ್ರಶಸ್ತಿ ಓಟದಿಂದ ಅವರು ಬಹುತೇಕ ನಿರ್ಗಮಿಸಿದ ಬೆನ್ನಲ್ಲೇ, ಪ್ರಜ್ಞಾನಂದ ರಮೇಶಬಾಬು ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಲಿಯಾನ್ ಲೂಕ್ ಮೆಂಡೋನ್ಸಾ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಮುನ್ನಡೆಯನ್ನು ಭದ್ರಪಡಿಸಿಕೊಂಡಿದ್ದಾರೆ. ಮೆಂಡೋನ್ಸಾ ಹೊರತಾಗಿ ಪ್ರಜ್ಞಾನಂದ ಈ ಟೂರ್ನಿಯಲ್ಲಿ ಭಾರತದ ಪೆಂಟಾಲಾ ಹರಿಕೃಷ್ಣ ಹಾಗೂ ಅರ್ಜುನ್ ಎರಿಗೈಸಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಶೇಕಡ 94.3 ನಿಖರತೆಯೊಂದಿಗೆ ಪ್ರಜ್ಞಾನಂದ ಗಮನ ಸೆಳೆದರು.
ನಾಲ್ಕನೇ ಸುತ್ತಿನ ಅಂತ್ಯಕ್ಕೆ ವಿಶ್ವದ ಎಂಟನೇ ಕ್ರಮಾಂಕದ ಆಟಗಾರ ಪ್ರಜ್ಞಾನಂದ 3.5 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಂಗಳವಾರದ ಮತ್ತೊಂದು ಪಂದ್ಯದಲ್ಲಿ ನೊದಿರ್ ಬೆಕ್ ಅಬ್ದುಸತ್ತೊರೋವ್ ಅವರು ವೀ ಯಿ ವಿರುದ್ಧ ಡ್ರಾ ಸಾಧಿಸಿದರು. ಪೆಂಟಾಲ ಹರಿಕೃಷ್ಣ ಮಂಗಳವಾರ ಕೇವಲ 23 ನಡೆಗಳಲ್ಲಿ ನೆದರ್ಲೆಂಡ್ಸ್ನ ಮ್ಯಾಕ್ಸ್ ವರ್ಮೆರ್ಡೆಮ್ ವಿರುದ್ಧ ಗೆಲುವು ಸಾಧಿಸಿದರು.
ಟೂರ್ನಿಯಲ್ಲಿ ನೊದಿರ್ಬೆಕ್ ಅಬ್ದುಸತ್ತೊರೋವ್ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಡಿ.ಗುಕೇಶ್, ಕರೂನಾ ಫ್ಯಾಬಿನೊ, ವ್ಲಾದಿಮಿರ್ ಫೆಡೊಸೀವ್, ವಿನ್ಸೆಂಟ್ ಕೇಮರ್, ಪೆಂಟಲ ಹರಿಕೃಷ್ಣ ಜಂಟಿ ಮೂರನೇ ಸ್ಥಾನ ಹೊಂದಿದ್ದಾರೆ.







