ಬರ್ಮಿಂಗ್ ಹ್ಯಾಮ್ ನಲ್ಲಿ ಸತತ ಸೋಲಿನಿಂದ ಹೊರಬರುವುದೇ ಭಾರತ ತಂಡ?

PC : PTI
ಲಂಡನ್: ಸರಣಿಯಲ್ಲಿ ಮರು ಹೋರಾಟ ನೀಡುವ ಭಾರತ ಕ್ರಿಕೆಟ್ ತಂಡದ ಗುರಿಗೆ ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ಕ್ರೀಡಾಂಗಣ ಕಠಿಣ ಪರೀಕ್ಷೆ ಒಡ್ಡಲು ಸಜ್ಜಾಗಿದೆ. ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡ ಎದುರಿಸಿರುವ ಅತ್ಯಂತ ಸವಾಲಿನ ಕ್ರೀಡಾಂಗಣಗಳಲ್ಲಿ ಎಜ್ ಬಾಸ್ಟನ್ ಕೂಡ ಒಂದಾಗಿದೆ.
ಹೆಡ್ಡಿಂಗ್ಲೆಯಲ್ಲಿ ಐದು ವೈಯಕ್ತಿಕ ಶತಕಗಳನ್ನು ಗಳಿಸಿ, 4ನೇ ಇನಿಂಗ್ಸ್ನಲ್ಲಿ 371 ರನ್ ಗುರಿ ನೀಡಿದ ಹೊರತಾಗಿಯೂ ಇಂಗ್ಲೆಂಡ್ ತಂಡದ ವಿರುದ್ಧ ಆಘಾತಕಾರಿ ಸೋಲನುಭವಿಸಿರುವ ಟೀಮ್ ಇಂಡಿಯಾವು ದಶಕಗಳಿಂದ ಕಾಡುತ್ತಿದ್ದ ದಾಖಲೆಯನ್ನು ಈಗ ಮುರಿಯಬೇಕಾಗಿದೆ.
ಎಜ್ ಬಾಸ್ಟನ್ ಕ್ರೀಡಾಂಗಣವು ಭಾರತವು ದೀರ್ಘ ಸಮಯದಿಂದ ಒಂದೂ ಗೆಲುವನ್ನೇ ಕಾಣದ ಮೈದಾನಗಳ ಪೈಕಿ ಒಂದಾಗಿದೆ. ಈ ಮೈದಾನದಲ್ಲಿ ಭಾರತ ತಂಡವು 7 ಪಂದ್ಯಗಳನ್ನು ಆಡಿದೆ. ಆದರೆ ಒಂದೂ ಪಂದ್ಯವನ್ನು ಗೆದ್ದಿಲ್ಲ. ಪ್ರಸಕ್ತ ಸರಣಿಯ 2ನೇ ಪಂದ್ಯವು ಈ ಮೈದಾನದಲ್ಲಿ ನಡೆಯುತ್ತಿದ್ದು, ಇದು ಇಲ್ಲಿ ಭಾರತ ಆಡಲಿರುವ 8ನೇ ಪಂದ್ಯವಾಗಲಿದೆ.
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಹಾಗೂ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ನಲ್ಲಿ ಭಾರತೀಯ ತಂಡವು ತಲಾ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಲಾಹೋರ್ ನ ಗದ್ದಾಫಿ ಸ್ಟೇಡಿಯಮ್ ನಲ್ಲಿ 7 ಪಂದ್ಯ, ಗಯಾನ ಹಾಗೂ ಕರಾಚಿಯ ನ್ಯಾಶನಲ್ ಸ್ಟೇಡಿಯಮ್ ನಲ್ಲಿ ತಲಾ 6 ಪಂದ್ಯಗಳನ್ನು ಆಡಿದ್ದರೂ ಗೆಲುವು ಪಡೆಯಲು ಸಾಧ್ಯವಾಗಿಲ್ಲ.
ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಬಹುತೇಕ ಭಾಗ ಭಾರತ ತಂಡವು ಹಿಡಿತ ಸಾಧಿಸಿತ್ತು. ಆದರೆ ಇಂಗ್ಲೆಂಡ್ ತಂಡದ ನಿರ್ಭೀತಿಯ ಚೇಸ್ನಿಂದಾಗಿ ಸೋಲುವಂತಾಯಿತು. ಬೆನ್ ಡಕೆಟ್ 149 ರನ್ ಗಳಿಸಿದ್ದರೆ, ಜೋ ರೂಟ್ ತಾಳ್ಮೆಯ ಇನಿಂಗ್ಸ್ ಮೂಲಕ ಅಂತಿಮ ಸ್ಪರ್ಶ ನೀಡಿದರು.
ಎಜ್ ಬಾಸ್ಟನ್ನಲ್ಲಿ ಭಾರತ ತಂಡವು ಮತ್ತೊಂದು ಸೋಲು ಕಂಡರೆ ಇಂಗ್ಲೆಂಡ್ ತಂಡವು ಸರಣಿಯಲ್ಲಿ ಮೇಲುಗೈ ಸಾಧಿಸಲಿದೆ. ಈ ಮೈದಾನದಲ್ಲಿ ಭಾರತದ ಕಳಪೆ ದಾಖಲೆಗೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗುತ್ತದೆ.
ಒಂದು ವೇಳೆ ಭಾರತವು ಬರ್ಮಿಂಗ್ ಹ್ಯಾಮ್ ನಲ್ಲಿ ಗೆದ್ದರೆ 1967ರಿಂದ ಕಾಡುತ್ತಿದ್ದ ಸತತ ಸೋಲಿನಿಂದ ಮುಕ್ತಿ ಸಿಗಲಿದೆ.
►ಭಾರತ ತಂಡವು ಅತಿ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿ ಒಂದೂ ಪಂದ್ಯವನ್ನು ಗೆಲ್ಲದ ಕ್ರೀಡಾಂಗಣಗಳು
9-ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
9-ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್
8-ಎಜ್ ಬಾಸ್ಟನ್, ಬರ್ಮಿಂಗ್ ಹ್ಯಾಮ್
7-ಗದ್ದಾಫಿ ಸ್ಟೇಡಿಯಮ್, ಲಾಹೋರ್
6-ಬೌರ್ಡಾ, ಗಯಾನ
6-ನ್ಯಾಶನಲ್ ಸ್ಟೇಡಿಯಮ್, ಕರಾಚಿ







