ನಾಳೆ(ಫೆ. 12) ಟೀಮ್ ಇಂಡಿಯಾಕ್ಕೆ ನಮೀಬಿಯಾ ಎದುರಾಳಿ

Photo Credit : PTI
ಹೊಸದಿಲ್ಲಿ, ಫೆ.11: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಮೆರಿಕ ತಂಡದ ವಿರುದ್ಧ ಗೆಲುವು ದಾಖಲಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಗುರುವಾರ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ.
ನಮೀಬಿಯಾ ತಂಡವು ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೇವಲ 156 ರನ್ ಗಳಿಸಿ ಸೋಲುಂಡಿತ್ತು.
ಜಸ್ಪ್ರಿತ್ ಬುಮ್ರಾ, ಅಭಿಷೇಕ್ ಶರ್ಮಾ ಹಾಗೂ ವಾಶಿಂಗ್ಟನ್ ಸುಂದರ್ಗೆ ಸಂಬಂಧಿಸಿ ಫಿಟ್ನೆಸ್ ಹಾಗೂ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡ ವಿಶ್ವಕಪ್ನಲ್ಲಿ ಬೃಹತ್ ಗೆಲುವಿನತ್ತ ಚಿತ್ತ ಹರಿಸಿದೆ.
ಭಾರತ ತಂಡವು ಮುಂಬೈನಲ್ಲಿ ಅಮೆರಿಕ ತಂಡದ ವಿರುದ್ಧ ಪರದಾಟ ನಡೆಸಿತ್ತು. ಸೂರ್ಯಕುಮಾರ ಯಾದವ್ ಗೆಲುವಿನ ಸ್ಕೋರ್ ಗಳಿಸಿದ್ದರು. ಸೂರ್ಯಕುಮಾರ್ ಇದೀಗ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದು ವಿರಾಟ್ ಕೊಹ್ಲಿ ದಾಖಲೆ (16) ಯನ್ನು ಮುರಿದಿದ್ದಾರೆ.
ಅಸೋಸಿಯೇಟ್ ದೇಶ ನಮೀಬಿಯಾ ಮತ್ತೊಮ್ಮೆ ಸ್ಪಿನ್ ಬೌಲಿಂಗ್ ಮೂಲಕ ದಾಳಿ ಆರಂಭಿಸಲಿದೆ. ಬೆರ್ನಾರ್ಡ್ ಸ್ಕೋಲ್ಟ್ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಬೆರ್ನಾರ್ಡ್ ಕೇವಲ 27 ರನ್ ನೀಡಿ ಓಪನರ್ ಮ್ಯಾಕ್ಸ್ ಡಿ ಡೌಡ್ ವಿಕೆಟ್ ಪಡೆದಿದ್ದರು.
ಟೀಮ್ ನ್ಯೂಸ್
ಸುಂದರ್ ಭಾರತೀಯ ತಂಡವನ್ನು ಸೇರಲಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಮೊದಲ ಪಂದ್ಯವನ್ನಾಡದ ಬುಮ್ರಾ ಚೇತರಿಸಿಕೊಂಡಂತೆ ಕಂಡುಬಂದಿದ್ದು, ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಭಿಷೇಕ್ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಜ್ವರದೊಂದಿಗೆ ಮುಂಬೈನಲ್ಲಿ ಆಡಿದ್ದ ಅಭಿಷೇಕ್ ಅವರ ಆರೋಗ್ಯ ದಿಲ್ಲಿಗೆ ಬಂದ ನಂತರ ಹದಗೆಟ್ಟಿದ್ದು, ಆಸ್ಪತ್ರೆಗೆ ಸೇರಿದ್ದಾರೆ.
ಅಂಕಿ-ಅಂಶ
ಕಳೆದ ಆವೃತ್ತಿಯ ಎಂಟು ಪಂದ್ಯಗಳು ಸೇರಿದಂತೆ ಭಾರತ ತಂಡವು ಟಿ-20 ವಿಶ್ವಕಪ್ನಲ್ಲಿ ಸತತ 9ನೇ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಟಿ-20 ವಿಶ್ವಕಪ್ನಲ್ಲಿ ಹೆಚ್ಚು ಬಾರಿ ಸತತ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು 2022 ಹಾಗೂ 2024ರಲ್ಲಿ ಸತತ ಎಂಟು ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಮುರಿದಿದೆ.
ತಂಡಗಳು
ಭಾರತ (ಸಂಭಾವ್ಯ): 1. ಅಭಿಷೇಕ್ ಶರ್ಮಾ/ಸಂಜು ಸ್ಯಾಮ್ಸನ್, 2. ಇಶಾನ್ ಕಿಶನ್, 3. ತಿಲಕ್ ವರ್ಮಾ, 4. ಸೂರ್ಯಕುಮಾರ ಯಾದವ್ (ನಾಯಕ), 5. ಹಾರ್ದಿಕ್ ಪಾಂಡ್ಯ, 6. ರಿಂಕು ಸಿಂಗ್, 7. ಶಿವಂ ದುಬೆ, 8. ಅಕ್ಷರ್ ಪಟೇಲ್, 9. ಅರ್ಷದೀಪ್ ಸಿಂಗ್, 10. ಜಸ್ಪ್ರಿತ್ ಬುಮ್ರಾ/ಮುಹಮ್ಮದ್ ಸಿರಾಜ್, 11. ವರುಣ್ ಚಕ್ರವರ್ತಿ.
ನಮೀಬಿಯಾ (ಸಂಭಾವ್ಯ): 1. ಲೌರೆನ್ ಸ್ಟೀನ್ಕ್ಯಾಂಪ್, 2. ಜಾನ್ ಫ್ರಿಲಿಂಕ್, 3. ಜಾನ್ ನಿಕೋಲ್, 4. ಗೆರ್ಹಾರ್ಡ್ ಎರಾಸ್ಮಸ್ (ನಾಯಕ), 5. ಜೆ.ಜೆ. ಸ್ಮಿತ್, 6. ಝೇನ್ ಗ್ರೀನ್ (ವಿಕೆಟ್ಕೀಪರ್), 7. ಡೈಲನ್ ಲೀಚರ್, 8. ವಿಲ್ಲೆಮ್ ಮೈಬರ್ಗ್, 9. ರೂಬೆನ್ ಟ್ರಂಪಲ್ಮನ್, 10. ಬೆರ್ನಾರ್ಡ್ ಸ್ಕೋಲ್ಟ್, 11. ಬೆನ್ ಶಿಕೊಂಗೊ.
ಪಂದ್ಯ ಆರಂಭದ ಸಮಯ: ರಾತ್ರಿ 7:00






