ಲಾ ಲಿಗ ಪ್ರಶಸ್ತಿ ಗೆದ್ದ ಬಾರ್ಸಿಲೋನ ತಂಡ

Photo Credit : PTI , AP
ಬಾರ್ಸಿಲೋನ, ಮೇ 11: ರವಿವಾರ ತನ್ನ ಬದ್ಧ ಎದುರಾಳಿ ರಿಯಲ್ ಮ್ಯಾಡ್ರಿಡ್ ತಂಡವನ್ನು 2-0 ಗೋಲಿನ ಅಂತರದಿಂದ ಸೋಲಿಸಿದ ಬಾರ್ಸಿಲೋನ ತಂಡವು ತನ್ನ 29ನೇ ಲಾ ಲಿಗ ಪ್ರಶಸ್ತಿಯನ್ನು ಗೆದ್ದಿದೆ.
ಇನ್ನೂ ಮೂರು ಪಂದ್ಯಗಳು ಬಾಕಿಯಿರುವಂತೆಯೇ, ಬಾರ್ಸಿಲೋನದ ಕ್ಯಾಂಪ್ ನೋ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಕೋಚ್ ಹ್ಯಾನ್ಸಿ ಫ್ಲಿಕ್ರ ತಂಡವು 91 ಅಂಕಗಳನ್ನು ಗಳಿಸಿ ಅಭೇದ್ಯ ಮುನ್ನಡೆ ಸಾಧಿಸಿತು. ಅದು ಎರಡನೇ ಸ್ಥಾನದಲ್ಲಿರುವ ರಿಯಲ್ ಮ್ಯಾಡ್ರಿಡ್ಗಿಂತ 14 ಅಂಕಗಳಿಂದ ಮುಂದಿದೆ. ಪ್ರಸಕ್ತ ಋತುವಿನ ಲಾ ಲಿಗ ಪಂದ್ಯಾವಳಿಯಲ್ಲಿ ಬಾರ್ಸಿಲೋನ ಕೇವಲ ನಾಲ್ಕು ಪಂದ್ಯಗಳಲ್ಲಿ ಸೋತಿದೆ. 69 ಅಂಕಗಳನ್ನು ಗಳಿಸಿರುವ ವಿಲ್ಲಾರ್ರಿಯಲ್ ಮೂರನೇ ಸ್ಥಾನದಲ್ಲಿದೆ.
ಪ್ರಶಸ್ತಿ ಆಶೆಯನ್ನು ಜೀವಂತವಾಗಿರಿಸಬೇಕಾದರೆ ರಿಯಲ್ ಮ್ಯಾಡ್ರಿಡ್ ರವಿವಾರದ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆದರೆ, ಈ ಹೋರಾಟದಲ್ಲಿ ಅದು ವಿಫಲವಾಯಿತು.
ಬಾರ್ಸಿಲೋನ ಪರವಾಗಿ ಒಂಭತ್ತನೇ ನಿಮಿಷದಲ್ಲಿ ರ್ಯಾಶ್ಫೋರ್ಡ್ ಮೊದಲ ಗೋಲು ಬಾರಿಸಿದರು. ಒಂಭತ್ತು ನಿಮಿಷಗಳ ಬಳಿಕ, ಟೊರಿಸ್ ಎರಡನೇ ಗೋಲು ಬಾರಿಸಿದರು. ಇದೇ ಗೋಲಿನ ಅಂತರವನ್ನು ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ಅದು ಯಶಸ್ವಿಯಾಯಿತು.




