ಚಾಂಪಿಯನ್ಸ್ ಟ್ರೋಫಿ ನಿರ್ಗಮನದ ಬಳಿಕ ಟೆಂಬ ಬವುಮ ನಿವೃತ್ತಿ?
ದಕ್ಷಿಣ ಆಫ್ರಿಕ ನಾಯಕನ ಬೆಂಬಲಕ್ಕೆ ಧಾವಿಸಿದ ವರ್ನನ್ ಫಿಲಾಂಡರ್

ಟೆಂಬ ಬವುಮ | PTI
ಲಾಹೋರ್ : ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಮುನ್ನಡೆಸುವುದನ್ನು ಟೆಂಬ ಬವುಮ ಮುಂದುವರಿಸಬೇಕು ಎಂದು ದಕ್ಷಿಣ ಆಫ್ರಿಕದ ಮಾಜಿ ವೇಗದ ಬೌಲರ್ ವರ್ನನ್ ಫಿಲಾಂಡರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಎರಡು ವರ್ಷಗಳ ಕಾಲ ನಾಯಕತ್ವವನ್ನು ವಹಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಅವರು ಹೇಳಿದ್ದಾರೆ.
ಲಾಹೋರ್ನ ಗದ್ದಾಫಿ ಸ್ಟೇಡಿಯಮ್ನಲ್ಲಿ ಬುಧವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎರಡನೇ ಸೆಮಿಫೈನಲ್ನಲ್ಲಿ ನ್ಯೂಝಿಲ್ಯಾಂಡ್ ದಕ್ಷಿಣ ಆಫ್ರಿಕವನ್ನು 50 ರನ್ಗಳಿಂದ ಸೋಲಿಸಿದ ಬಳಿಕ ಫಿಲಾಂಡರ್ ಈ ಹೇಳಿಕೆ ನೀಡಿದ್ದಾರೆ. ಪಂದ್ಯವನ್ನು ಗೆಲ್ಲಲು ನ್ಯೂಝಿಲ್ಯಾಂಡ್ ದಕ್ಷಿಣ ಆಫ್ರಿಕಕ್ಕೆ 363 ರನ್ಗಳ ಗುರಿಯನ್ನು ನಿಗದಿಪಡಿಸಿತ್ತು. ಬವುಮರ 56, ರಸೀ ವಾನ್ ಡರ್ ಡಸನ್ರ 69 ಮತ್ತು ಡೇವಿಡ್ ಮಿಲ್ಲರ್ ಅಜೇಯ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಕ್ಕೆ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 312 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
‘‘ಅವರೊಬ್ಬ ಅತ್ಯುತ್ತಮ ನಾಯಕ. ಕಳೆದ 24 ತಿಂಗಳುಗಳ ಅವಧಿಯಲ್ಲಿ ಡ್ರೆಸಿಂಗ್ ಕೋಣೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ನನಗನಿಸುತ್ತದೆ. ಟೆಸ್ಟ್ ಪಂದ್ಯಗಳ ವಿಭಾಗದಲ್ಲಿ ಅವರ ನಿರ್ವಹಣೆ ಅತ್ಯುತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಏಕದಿನ ಕ್ರಿಕೆಟ್ಗೆ ಸಂಬಂಧಿಸಿದ ಊಹಾಪೋಹಗಳನ್ನು ವಿಮರ್ಶಿಸಲು ನಾವು ಸಾಕಷ್ಟು ಸಾಕಷ್ಟು ಸಂಖ್ಯೆಯಲ್ಲಿ ಆ ಪಂದ್ಯಗಳನ್ನು ಆಡಿದ್ದೇವೆ ಎಂದು ನನಗನಿಸುವುದಿಲ್ಲ’’ ಎಂದರು.
‘‘ಆದರೆ, ಅವರ ಏಕದಿನ ಕ್ರಿಕೆಟ್ ಅಂಕಿಸಂಖ್ಯೆಗಳು ಮತ್ತು ದಾಖಲೆಗಳನ್ನು ನೋಡಿದರೆ, ಅವರು ದಕ್ಷಿಣ ಆಫ್ರಿಕದ ಅಮೋಘ ಆಟಗಾರ ಎಂದು ನನಗನಿಸುತ್ತದೆ. ಅವರು ಬ್ಯಾಟಿಂಗ್ನಲ್ಲಿ ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಾರೆ. ಹೌದು, ಬುಧವಾರ ರಾತ್ರಿ ಅವರಿಗೆ ಹಾಗೆ ಮಾಡಲು ಆಗಲಿಲ್ಲ. ಆದರೆ ಇಂದಿನ ಮಟ್ಟಕ್ಕೆ ಬರಲು , ದಕ್ಷಿಣ ಆಫ್ರಿಕವು ಅವರ ಫಾರ್ಮನ್ನೇ ಅತಿಯಾಗಿ ನೆಚ್ಚಿಕೊಂಡಿದೆ. ಇನ್ನೊಂದು ಫೈನಲ್ ತಲುಪಲು ಇದ್ದ ಕೊನೆಯ ತಡೆಯಲ್ಲಿ ಅದು ಮುಗ್ಗರಿಸಿದೆ’’ ಎಂದು ಫಿಲಾಂಡರ್ ಅಭಿಪ್ರಾಯಪಟ್ಟಿದ್ದಾರೆ.







