ಸೋಮವಾರದಿಂದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿ | ಈ ಬಾರಿ ತಂತ್ರಜ್ಞಾನ ಕ್ರಾಂತಿಗೆ ಸಾಕ್ಷಿಯಾಗಲಿರುವ ಕ್ರೀಡಾ ಹಬ್ಬ

Photo Credit: Carine06
ಲಂಡನ್: ಹುಲ್ಲಿನ ಅಂಗಳದ ಗ್ರ್ಯಾನ್ ಸ್ಲಾಮ್ ಟೆನಿಸ್ ಪಂದ್ಯಾವಳಿ ವಿಂಬಲ್ಡನ್ ಚಾಂಪಿಯನ್ ಶಿಪ್ ನ 138ನೇ ಆವೃತ್ತಿಯು ಸೋಮವಾರ ಲಂಡನ್ನ ವಿಂಬಲ್ಡನ್ನಲ್ಲಿ ಆರಂಭಗೊಳ್ಳಲಿದೆ. ಜುಲೈ 13ರಂದು ಪುರುಷರ ಸಿಂಗಲ್ಸ್ ಫೈನಲ್ ನೊಂದಿಗೆ ಮುಕ್ತಾಯಗೊಳ್ಳಲಿದೆ.
ಈ ವರ್ಷದ ವಿಂಬಲ್ಡನ್ ಪಂದ್ಯಾವಳಿಯು ಹಲವು ಮಹತ್ವದ ತಂತ್ರಜ್ಞಾನಗಳಿಗೆ ಸಾಕ್ಷಿಯಾಗಲಿದೆ. 147 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಸಂಪ್ರದಾಯಕ್ಕೆ ಮಹತ್ವ ನೀಡುವ ಪಂದ್ಯಾವಳಿ ಎಂಬುದಾಗಿ ಗುರುತಿಸಲ್ಪಡುತ್ತಿರುವ ವಿಂಬಲ್ಡನ್ ಪಂದ್ಯಾವಳಿಯು ಮಾನವ ಲೈನ್ ತೀರ್ಪುಗಾರರು ಇಲ್ಲದೆ ನಡೆಯಲಿದೆ. ಮಾನವ ಲೈನ್ ತೀರ್ಪುಗಾರರ ಸ್ಥಾನದಲ್ಲಿ, 450ಕ್ಕೂ ಅಧಿಕ ಟ್ರ್ಯಾಕಿಂಗ್ ಕ್ಯಾಮರಗಳನ್ನು ಒಳಗೊಂಡ ಸಂಪೂರ್ಣ ಸ್ವಯಂಚಾಲಿತ ಇಲೆಕ್ಟ್ರಾನಿಕ್ ಲೈನ್-ಕಾಲಿಂಗ್ ವ್ಯವಸ್ಥೆಯನ್ನು ನಿಯೋಜಿಸಲಾಗುವುದು.
ಸಾಂಪ್ರದಾಯಿಕ ನಿರ್ಲಿಪ್ತ ಲೈನ್ ತೀರ್ಪುಗಾರರ ಅನುಪಸ್ಥಿತಿಯು ಕೆಲವರ ಅಸಹನೆಗೆ ಕಾರಣವಾಗಬಹುದಾದರೂ, ನೂತನ ಇಲೆಕ್ಟ್ರಾನಿಕ್ ವ್ಯವಸ್ಥೆಯು ಲೋಪರಹಿತ ತೀರ್ಪನ್ನು ಖಚಿತಪಡಿಸಲಿದೆ.
ಇನ್ನೊಂದು ಸಣ್ಣ ಬದಲಾವಣೆಯೆಂದರೆ, ಸಿಂಗಲ್ಸ್ ಫೈನಲ್ ಪಂದ್ಯಗಳನ್ನು ಸ್ಥಳೀಯ ಸಮಯ ಸಂಜೆ 4 ಗಂಟೆಗೆ ಆರಂಭವಾಗುವಂತೆ ನಿಗದಿ ಮಾಡಲಾಗಿದೆ.
► ಬಹುಮಾನ ಮೊತ್ತ 620 ಕೋಟಿ ರೂ.!
ವಿಂಬಲ್ಡನ್ 2025ರ ಬಹುಮಾನಗಳ ಒಟ್ಟು ಮೊತ್ತ ಭರ್ಜರಿ 53.55 ಮಿಲಿಯ ಪೌಂಡ್ (ಸುಮಾರು 620 ಕೋಟಿ ರೂಪಾಯಿ) ಆಗಿದೆ. ಇದು ಕಳೆದ ವರ್ಷದ ಮೊತ್ತಕ್ಕಿಂತ 7 ಶೇಕಡ ಅಧಿಕವಾಗಿದೆ ಮತ್ತು 10 ವರ್ಷಗಳ ಹಿಂದಿನ ಮೊತ್ತದ ದುಪ್ಪಟ್ಟಾಗಿದೆ.
ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಜೇತರು ತಲಾ 3 ಮಿಲಿಯ ಪೌಂಡ್ (ಸುಮಾರು 34.73 ಕೋಟಿ ರೂ.) ನಗದು ಬಹುಮಾನ ಸ್ವೀಕರಿಸಲಿದ್ದಾರೆ. ಇದು 2024ರ ಬಹುಮಾನಕ್ಕೆ ಹೋಲಿಸಿದರೆ 11 ಶೇಕಡ ಹೆಚ್ಚಳವಾಗಿದೆ.
ಸಿಂಗಲ್ಸ್ ರನ್ನರ್ಸ್-ಅಪ್ ಆಟಗಾರರು 1.52 ಮಿಲಿಯ ಪೌಂಡ್ (17.59 ಕೋಟಿ ರೂ.) ಪಡೆಯಲಿದ್ದಾರೆ. ಸೆಮಿಫೈನಲ್ ವರೆಗೆ ತಲುಪಿದವರು 7,75,000 ಪೌಂಡ್ (ಸುಮಾರು 8.97 ಕೋಟಿ ರೂ.) ಸಂಪಾದಿಸುತ್ತಾರೆ. ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಆಡಿದವರು 4 ಲಕ್ಷ ಪೌಂಡ್ (4.63 ಕೋಟಿ ರೂ.) ಸ್ವೀಕರಿಸುತ್ತಾರೆ. ಮೊದಲ ಸುತ್ತಿನಲ್ಲಿ ಆಡಿದವರಿಗೂ 66,000 ಪೌಂಡ್ (ಸುಮಾರು 76.41 ಲಕ್ಷ ರೂ.) ಸಂಭಾವನೆ ಸಿಗುತ್ತದೆ.
ಡಬಲ್ಸ್ ಪ್ರಶಸ್ತಿ ವಿಜೇತರು 6,80,000 ಪೌಂಡ್ (7.87 ಕೋಟಿ ರೂ.) ಮೊತ್ತವನ್ನು ಹಂಚಿಕೊಳ್ಳುತ್ತಾರೆ. ಹಾಗೂ ಮಿಶ್ರ ಡಬಲ್ಸ್ ಪ್ರಶಸ್ತಿ ವಿಜೇತರು 1,35,000 ಪೌಂಡ್ (ಸುಮಾರು 1.56 ಕೋಟಿ ರೂ.) ಬಹುಮಾನವನ್ನು ಹಂಚಿಕೊಳ್ಳುತ್ತಾರೆ.
►ಸತತ 3ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅಲ್ಕರಾಝ್
ಎರಡು ಬಾರಿಯ ಪುರುಷರ ಹಾಲಿ ಚಾಂಪಿಯನ್ ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ ವಿಂಬಲ್ಡನ್ ಪಂದ್ಯಾವಳಿಯ ಮೊದಲ ದಿನವಾದ ಸೋಮವಾರ ಲಂಡನ್ನ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಆ್ಯಂಡ್ ಕ್ರೋಕೆಟ್ ಕ್ಲಬ್ ಮೈದಾನದಲ್ಲಿ, ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಇಟಲಿಯ ಫೇಬಿಯೊ ಫಾಗ್ನಿನಿಯನ್ನು ಎದುರಿಸಲಿದ್ದಾರೆ. ಅವರು ಈ ಬಾರಿ ತನ್ನ ಸತತ ಮೂರನೇ ವಿಂಬಲ್ಡನ್ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ.
ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ, ವಿಶ್ವದ ನಂಬರ್ ವನ್ ಅರೈನಾ ಸಬಲೆಂಕ ತನ್ನ ಮೊದಲ ಸುತ್ತಿನ ಪಂದ್ಯವನ್ನು ಕೆನಡದ ಕಾರ್ಸನ್ ಬ್ರ್ಯಾನ್ಸ್ಟೈನ್ ವಿರುದ್ಧ ಆಡಲಿದ್ದಾರೆ.
ಅಲ್ಕರಾಜ್ ಈ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಓಪನ್ ಟೆನಿಸ್ ಯುಗದಲ್ಲಿ ಕನಿಷ್ಠ ಮೂರು ಸತತ ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದಿರುವ ಐದನೇ ಆಟಗಾರನಾಗಿ ಹೊರಹೊಮ್ಮಲಿದ್ದಾರೆ. ಇದಕ್ಕೂ ಮೊದಲು, ಬ್ಯೋನ್ ಬೋರ್ಗ್, ಪೀಟ್ ಸಾಂಪ್ರಸ್, ರೋಜರ್ ಫೆಡರರ್ ಮತ್ತು ನೊವಾಕ್ ಜೊಕೋವಿಕ್ ಈ ಸಾಧನೆಗೈದಿದ್ದಾರೆ.
ಕಳೆದ ಎರಡು ವಿಂಬಲ್ಡನ್ ಫೈನಲ್ಗಳಲ್ಲಿ ಜೊಕೊವಿಕ್ರನ್ನು ಸೋಲಿಸಿರುವ ಅಲ್ಕರಾಝ್, 18 ಪಂದ್ಯಗಳ ಅಜೇಯ ಸರಣಿಯೊಂದಿಗೆ ವಿಂಬಲ್ಡನ್ಗೆ ಬಂದಿದ್ದಾರೆ.







