ಇಂಗ್ಲೆಂಡ್ ವಿರುದ್ಧದ ಟೆಸ್ಟ್ | ಪಂತ್ ಕೈಬೆರಳಿಗೆ ಗಾಯ

ರಿಷಭ್ ಪಂತ್ | PC : X
ಲಂಡನ್: ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ 2ನೇ ಸೆಶನ್ ನಲ್ಲಿ ರಿಷಭ್ ಪಂತ್ ಅವರು ಚೆಂಡು ಪಡೆಯುವ ಯತ್ನದಲ್ಲಿದ್ದಾಗ ಬಲಗೈ ಮಧ್ಯ ಬೆರಳಿಗೆ ಗಾಯವಾಗಿದೆ. ಪಂತ್ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ನಡೆಸಿದರು.
ಜಸ್ಪ್ರಿತ್ ಬುಮ್ರಾ ಎಸೆದ 34ನೇ ಓವರ್ ನಲ್ಲಿ ಚೆಂಡು ಪಡೆಯಲು ಹೋದ ಪಂತ್ಗೆ ಗಾಯವಾಗಿದೆ. ಮೈದಾನದಲ್ಲಿ ಚಿಕಿತ್ಸೆ ಪಡೆದು ವಿಕೆಟ್ ಕೀಪಿಂಗ್ ಮುಂದುವರಿಸಲು ಪ್ರಯತ್ನಿಸಿದರು. ಆದರೆ 5 ಎಸೆತಗಳ ನಂತರ ಮೈದಾನವನ್ನು ತೊರೆದರು.
ಪಂತ್ ಅವರು ಡ್ರೆಸ್ಸಿಂಗ್ ರೂಮ್ ನಲ್ಲಿ ಗಾಯವಾಗಿರುವ ಬೆರಳಿಗೆ ಐಸ್ ಇಟ್ಟುಕೊಂಡು ಚಿಕಿತ್ಸೆ ಪಡೆದರು. ಪಂತ್ ಅವರ ಗಾಯ ಗಂಭೀರವಾಗಿಲ್ಲ ಎಂದು ತಿಳಿದುಬಂದಿದೆ.
2017ರ ಕ್ರಿಕೆಟ್ ನಿಯಮದ ಪ್ರಕಾರ ಪಂದ್ಯದ ವೇಳೆ ವಿಕೆಟ್ ಕೀಪರ್ ಬದಲಿಸಲು ಅವಕಾಶವಿದೆ. ಆದರೆ ಬದಲಿ ಕೀಪರ್ ಬ್ಯಾಟಿಂಗ್ ಮಾಡುವಂತಿಲ್ಲ. ಚೊಚ್ಚಲ ಪಂದ್ಯವನ್ನಾಡಿದ ನಂತರ ಪಂತ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಹೆಡ್ಡಿಂಗ್ಲೆಯಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 2 ಬಾರಿ ಶತಕ ಗಳಿಸಿದ್ದರು. ಆಂಡಿ ಫ್ಲವರ್ ನಂತರ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ.
ಪಂತ್ ಅನುಪಸ್ಥಿತಿಯಲ್ಲಿ ಜುರೆಲ್ ಅವರು 2023-24ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ತನ್ನ ಮೊದಲ ಸರಣಿಯಲ್ಲಿ 63.33ರ ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದಾರೆ.







