ಇಂಗ್ಲೆಂಡ್ ವಿರುದ್ಧದ ಟೆಸ್ಟ್ : ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ತಮ್ಮ ಆರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಟೆಸ್ಟ್ ದ್ವಿಶತಕದ ಸಾಧನೆ

ಜೈಸ್ವಾಲ್ | Photo: PTI
ವಿಶಾಖಪಟ್ಟಣಂ : ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ದ್ವಿಶತಕ ಸಿಡಿಸಿದ್ದಾರೆ. ತಮ್ಮ ಆರನೇ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಮೊದಲ ಟೆಸ್ಟ್ ದ್ವಿಶತಕವನ್ನು ಗಳಿಸಿದ ಸಾಧನೆ ಮಾಡಿದ್ದಾರೆ.
ಟೆಸ್ಟ್ ಪಂದ್ಯದ ಎರಡನೇ ದಿನದಂದು, ಜೈಸ್ವಾಲ್ ಈ ಸಾಧನೆ ಮಾಡಿದರು. ಮೊದಲ ದಿನದಾಂತ್ಯಕ್ಕೆ ಯಶಸ್ವಿ ಜೈಸ್ವಾಲ್ 179 ರನ್ ಗಳಿಸಿ ಅಜೇಯರಾಗಿ ಕ್ರೀಸ್ನಲ್ಲಿ ಉಳಿದಿದ್ದರು.
2ನೇ ಪಂದ್ಯದ 2ನೇ ದಿನದಾಟದ ಆರಂಭಕ್ಕೆ ಯಶಸ್ವಿ ಜೈಸ್ವಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಭರ್ಜರಿಯಾಗಿ ಬೌಂಡರಿ ಮೂಲಕ ದ್ವಿಶತಕ ಸಿಡಿಸಿ ಮಿಂಚಿದರು. ಜೈಸ್ವಾಲ್ 277 ಎಸೆತಗಳಲ್ಲಿ ತಮ್ಮ ಚೊಚ್ಚಲ ದ್ವಿಶತಕ ಪೂರೈಸಿದ್ದಾರೆ.
ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದ ಕೇವಲ 10ನೇ ಇನ್ನಿಂಗ್ಸ್ನಲ್ಲಿ ದ್ವಿಶತಕ ಗಳಿಸಿದರು. ಕಳೆದ ವರ್ಷ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದ, ಯಶಸ್ವಿ ಜೈಸ್ವಾಲ್ 171 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಸ್ಫೋಟಕ ಆರಂಭವನ್ನು ನೀಡಿದ್ದರು.





