ಭಾರತದ ವಿರುದ್ಧ ಟೆಸ್ಟ್ | ಡೇಲ್ ಸ್ಟೇಯ್ನ್ ದಾಖಲೆ ಮುರಿದ ಹಾರ್ಮರ್

ಸೈಮನ್ ಹಾರ್ಮರ್ | Photo Credit ; PTI
ಗುವಾಹಟಿ, ನ.26: ದಕ್ಷಿಣ ಆಫ್ರಿಕಾ ತಂಡವು ಭಾರತ ನೆಲದಲ್ಲಿ ಎರಡೂವರೆ ದಶಕಗಳ ನಂತರ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಮಹತ್ವದ ಕೊಡುಗೆ ನೀಡಿದ್ದಾರೆ.
ಹಾರ್ಮರ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 8.94ರ ಸರಾಸರಿಯಲ್ಲಿ ಒಟ್ಟು 17 ವಿಕೆಟ್ ಗಳನ್ನು ಪಡೆದಿದ್ದಾರೆ. ವಿಂಡೀಸ್ ನ ಕೋರ್ಟ್ನಿ ವಾಲ್ಶ್ ಅವರು 1994-95ರಲ್ಲಿ ನ್ಯೂಝಿಲ್ಯಾಂಡ್ ನಲ್ಲಿ 8.25ರ ಸರಾಸರಿಯಲ್ಲಿ ಒಟ್ಟು 16 ವಿಕೆಟ್ ಗಳನ್ನು ಪಡೆದಿದ್ದರು.
ಹಾರ್ಮರ್ ಅವರು ಭಾರತದಲ್ಲಿ ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್ ಗಳನ್ನು(27)ಪಡೆದ ದಕ್ಷಿಣ ಆಫ್ರಿಕಾದ ಬೌಲರ್ ಎನಿಸಿಕೊಂಡರು. ಈ ಮೂಲಕ ಡೇಲ್ ಸ್ಟೇಯ್ನ್(26 ವಿಕೆಟ್)ದಾಖಲೆಯನ್ನು ಮುರಿದರು.
ಹಾರ್ಮರ್ ಇದೀಗ 14 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 69 ವಿಕೆಟ್ ಗಳನ್ನು ಪಡೆದಿದ್ದಾರೆ. ಮೊದಲ 14 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ ಬೌಲರ್ ನ ಶ್ರೇಷ್ಠ ಸಾಧನೆ ಇದಾಗಿದೆ.
‘‘ನಾನು 10 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಪಂದ್ಯ ಆಡಿದ್ದೇನೆ. ನನಗೆ ವಿಭಿನ್ನ ಅನುಭವವಾಗಿದೆ. ಕಳೆದ ಬಾರಿಗಿಂತ ಹೆಚ್ಚು ಸ್ಮರಣೀಯ ನೆನಪಿನೊಂದಿಗೆ ಸ್ವದೇಶಕ್ಕೆ ಮರಳುತ್ತಿರುವೆ. ಭಾರತೀಯ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಖುಷಿಯಾಗುತ್ತಿದೆ’’ ಎಂದು ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಹಾರ್ಮರ್ ಪ್ರತಿಕ್ರಿಯಿಸಿದರು.







