ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ | ಕೊನೆಯ ಎರಡು ಪಂದ್ಯಕ್ಕೆ ನಿತೀಶ್ ಕುಮಾರ್ ರೆಡ್ಡಿ ಅಲಭ್ಯ
ಟೀಮ್ ಇಂಡಿಯಾಕ್ಕೆ ತೀವ್ರ ಹಿನ್ನಡೆ

ನಿತೀಶ್ ಕುಮಾರ್ ರೆಡ್ಡಿ | PTI
ಹೊಸದಿಲ್ಲಿ, ಜು.21: ಈಗ ನಡೆಯುತ್ತಿರುವ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯ ಇನ್ನುಳಿದ 2 ಪಂದ್ಯಗಳಿಂದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿದಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಖಚಿತಪಡಿಸಿದೆ.
‘‘ಮೊಣಕಾಲಿನ ಗಾಯದಿಂದಾಗಿ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಿಂದ ಅಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿದಿದ್ದಾರೆ. ನಿತೀಶ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ’’ ಎನ್ನುವುದಾಗಿ ಬಿಸಿಸಿಐ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನೆಟ್ ಪ್ರಾಕ್ಟೀಸ್ ವೇಳೆ ಸಾಯಿ ಸುದರ್ಶನ್ ಬಾರಿಸಿದ್ದ ಚೆಂಡನ್ನು ತಡೆಯುವ ಯತ್ನದಲ್ಲಿದ್ದಾಗ ಗಾಯಗೊಂಡಿದ್ದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಕೈಗೆ ಎರಡು ಹೊಲಿಗೆ ಹಾಕಲಾಗಿದೆ. ಅರ್ಷದೀಪ್ ಕೂಡ ಬುಧವಾರ ಮ್ಯಾಂಚೆಸ್ಟರ್ ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
‘‘ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಅರ್ಷದೀಪ್ ಸಿಂಗ್ ಹೊರಗುಳಿದಿದ್ದಾರೆ. ಬೆಕೆನ್ಹ್ಯಾಮ್ನಲ್ಲಿ ನೆಟ್ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಅವರು ತನ್ನ ಎಡಗೈ ಹೆಬ್ಬೆರಳ ಗಾಯಕ್ಕೆ ಒಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಚೇತರಿಕೆಯ ಬಗ್ಗೆ ನಿಗಾವಹಿಸಿದೆ’’ ಎಂದು ಬಿಸಿಸಿಐ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಅರ್ಷದೀಪ್ ಸಿಂಗ್ ಗಾಯಗೊಂಡಿರುವ ಕಾರಣ ಅವರ ಜಾಗಕ್ಕೆ ಹರ್ಯಾಣದ ವೇಗದ ಬೌಲರ್ ಅನ್ಶೂಲ್ ಕಾಂಬೋಜ್ ರನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿಸಲಾಗಿದೆ ಎಂದು ರವಿವಾರ ಬೆಳಗ್ಗೆ ಆಂಗ್ಲಪತ್ರಿಕೆಯು ವರದಿ ಮಾಡಿತ್ತು.
‘‘ಪುರುಷರ ಆಯ್ಕೆ ಸಮಿತಿಯು ಭಾರತೀಯ ಕ್ರಿಕೆಟ್ ತಂಡಕ್ಕೆ ಅನ್ಶೂಲ್ ಕಾಂಬೋಜ್ ಅವರನ್ನು ಸೇರಿಸಿದೆ. ಕಾಂಬೋಜ್ ಅವರು ಮ್ಯಾಂಚೆಸ್ಟರ್ ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಬಿಸಿಸಿಐ ಖಚಿತಪಡಿಸಿದೆ.
*ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪರಿಷ್ಕೃತ ತಂಡ:
ಶುಭಮನ್ ಗಿಲ್(ನಾಯಕ), ರಿಷಭ್ ಪಂತ್(ಉಪ ನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜ, ಧ್ರುವ್ ಜುರೆಲ್(ವಿಕೆಟ್ ಕೀಪರ್), ವಾಶಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್ ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್, ಅನ್ಶುಲ್ ಕಾಂಬೋಜ್.







