ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ | ಆಸ್ಟ್ರೇಲಿಯ ತಂಡ ಪ್ರಕಟ, ಸ್ಥಾನ ಉಳಿಸಿಕೊಂಡ ಲಾಬುಶೇನ್

ಮಾರ್ನಸ್ ಲಾಬುಶೇನ್ | Photo Credit : PTI
ಲಂಡನ್, ಸೆ. 7: ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಸರಣಿಗೆ ಆಸ್ಟ್ರೇಲಿಯವು ತನ್ನ 16 ಸದಸ್ಯರ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಕ್ರಿಕೆಟ್ ಆಸ್ಟ್ರೇಲಿಯವು ಸದ್ಯ ಕಳಪೆ ಫಾರ್ಮ್ನಲ್ಲಿರುವ ಮಾರ್ನಸ್ ಲಾಬುಶೇನ್ಗೆ ಮತ್ತೊಮ್ಮೆ ಅವಕಾಶ ನೀಡಿದೆ.
ಲಾಬುಶೇನ್ರನ್ನು ಕೈಬಿಡುವಂತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದ್ದರೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಸ್ಟ್ರೇಲಿಯದ ದಿಗ್ಗಜರಾದ ರಿಕಿ ಪಾಂಟಿಂಗ್ ಹಾಗೂ ಮ್ಯಾಥ್ಯೂ ಹೇಡನ್ ಅವರು ತಂಡದಲ್ಲಿ ಲಾಬುಶೇನ್ ಅವರ ಸ್ಥಾನವನ್ನು ಪ್ರಶ್ನಿಸಿದ್ದರು. ಆದರೆ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ ಬಲಗೈ ಬ್ಯಾಟರ್ ಲಾಬುಶೇನ್ ಬೆಂಬಲಕ್ಕೆ ನಿಂತಿದ್ದಾರೆ.
ಲಾಬುಶೇನ್ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಸದೆ ಮೂರು ವರ್ಷಗಳೇ ಕಳೆದಿವೆ. 2023ರ ಜುಲೈನಲ್ಲಿ ಕೊನೆಯ ಬಾರಿ ಶತಕ ಗಳಿಸಿದ್ದರು. ಹಿಂದಿನ 43 ಟೆಸ್ಟ್ ಇನಿಂಗ್ಸ್ ಗಳಲ್ಲಿ ಕೇವಲ 24.69 ಸರಾಸರಿ ಹೊಂದಿದ್ದಾರೆ.
ಕಳಪೆ ಫಾರ್ಮ್ನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಸ್ಟ್ರೇಲಿಯ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಆದರೆ ಆಯ್ಕೆಗಾರರು ಟೆಸ್ಟ್ ಕ್ರಿಕೆಟ್ ನಲ್ಲಿ ಲಾಬುಶೇನ್ ಮೇಲೆ ನಂಬಿಕೆ ಇರಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ತನ್ನ ಮೂರು ಇನಿಂಗ್ಸ್ ಗಳಲ್ಲಿ 1, 31 ಹಾಗೂ 4 ರನ್ ಗಳಿಸಿದ ಹೊರತಾಗಿಯೂ ಲಾಬುಶೇನ್ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಕಳೆದ ವರ್ಷ ಲಾರ್ಡ್ಸ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಆಡಿದ ಬಳಿಕ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಬಾರಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಈ ಸರಣಿಯ ಫಲಿತಾಂಶವು ಮುಂದಿನ ವರ್ಷ ದಿ ಓವಲ್ ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ ಗೆ ತಂಡದ ಭವಿಷ್ಯವನ್ನು ನಿರ್ಧರಿಸಲಿದೆ.
ಲಾಬುಶೇನ್ ಜೊತೆಗೆ ಇತ್ತೀಚೆಗೆ ಮಕಾಯ್ನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯ ಆಡಿರುವ ತಂಡದಲ್ಲಿರುವ 13 ಆಟಗಾರರನ್ನು ಉಳಿಸಿಕೊಂಡಿದೆ. 16 ಸದಸ್ಯರ ತಂಡಕ್ಕೆ ಕೂಪರ್ ಕೊನೊಲ್ಲಿ, ಮೈಕೆಲ್ ನೆಸೆರ್ ಹಾಗೂ ಮ್ಯಾಥ್ಯೂ ಕುಹ್ನೆಮನ್ ಸೇರಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಸ್ಟ್ರೇಲಿಯದ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲ್ಲಿ, ಕ್ಯಾಮರೂನ್ ಗ್ರೀನ್, ಜೋಶ್ ಹೇಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲಾಬುಶೇನ್, ನಾಥನ್ ಲಿಯೊನ್, ಮೈಕೆಲ್ ನೆಸೆರ್, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್ಸ್ಟರ್.






