ಡೋಪಿಂಗ್ ಪರೀಕ್ಷೆಯಲ್ಲಿ ಪಾಸಿಟಿವ್: ಕರ್ನಾಟಕದ ಓಟಗಾರ್ತಿ ಪ್ರಕೃತಿಗೆ ತಾತ್ಕಾಲಿಕ ನಿಷೇಧ

Photo: screengrab/instagram.com/DdWu9bsvdFY
ಬೆಂಗಳೂರು: ಕರ್ನಾಟಕದ ವೇಗದ ಓಟಗಾರ್ತಿ ಪ್ರಕೃತಿ ಆರ್. ರಾವ್ ಅವರು ನಿಷೇಧಿತ ಅನಾಬೊಲಿಕ್ ಸ್ಟೀರಾಯ್ಡ್ಗಳಾದ ‘ಸ್ಟಾನೊಝೊಲೋಲ್’ ಮತ್ತು ‘ಡ್ರೊಸ್ಟಾನೊಲೋನ್’ ಸೇವಿಸಿರುವುದು ಡೋಪಿಂಗ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.
ಇದರೊಂದಿಗೆ ಡೋಪಿಂಗ್ ಪ್ರಕರಣದಲ್ಲಿ ಸಿಲುಕಿರುವ ಭಾರತೀಯ ಅಥ್ಲೀಟ್ಗಳ ಪಟ್ಟಿಗೆ ಪ್ರಕೃತಿ ಆರ್. ರಾವ್ ಅವರ ಹೆಸರೂ ಸೇರ್ಪಡೆಯಾಗಿದೆ.
ಚಿತ್ರದುರ್ಗ ಮೂಲದ 24 ವರ್ಷದ ಈ ಅಥ್ಲೀಟ್, ಚೆನ್ನೈನಲ್ಲಿ ತರಬೇತುದಾರ ವಿಕ್ಟರ್ ಜೆಬಾ ಸಿಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಡೋಪಿಂಗ್ ಪರೀಕ್ಷೆಯಲ್ಲಿ ಪ್ರತಿಕೂಲ ವಿಶ್ಲೇಷಣಾತ್ಮಕ ವರದಿ (Adverse Analytical Finding) ಬಂದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಕೃತಿ 100 ಮೀಟರ್ ಓಟದಲ್ಲಿ ರಾಜ್ಯ ಚಾಂಪಿಯನ್ ಆಗಿದ್ದು, 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ನಿಗದಿತ ಅವಧಿಯೊಳಗೆ ಅವರು ಡೋಪಿಂಗ್ ಪರೀಕ್ಷೆಯ ಫಲಿತಾಂಶವನ್ನು ಪ್ರಶ್ನಿಸಿಲ್ಲ ಎಂದು ತಿಳಿದುಬಂದಿದೆ. ನಿಯಮ ಉಲ್ಲಂಘನೆಯನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಅವರ ನಿಷೇಧದ ಅವಧಿಯನ್ನು ಮೂರು ವರ್ಷಗಳಿಗೆ ಕಡಿತಗೊಳಿಸಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಜೂನ್ನಲ್ಲಿ ನಡೆದ ಸ್ಪರ್ಧೆಗಳ ವೇಳೆ ಪ್ರಕೃತಿಯನ್ನು ಎರಡು ಬಾರಿ ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೂನ್ 7ರಂದು ಪುಣೆಯಲ್ಲಿ ನಡೆದ ಇಂಡಿಯನ್ ಅಥ್ಲೆಟಿಕ್ಸ್ ಸೀರೀಸ್-8 ಹಾಗೂ ಒಂದು ವಾರದ ಬಳಿಕ ತಿರುವನಂತಪುರದಲ್ಲಿ ನಡೆದ ಐಎಎಸ್-10 ಸ್ಪರ್ಧೆಯ ವೇಳೆ ಅವರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಇದರ ಪರಿಣಾಮವಾಗಿ, ಜೂನ್ ಅಂತ್ಯದಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪ್ರಕೃತಿ ಗೆದ್ದಿದ್ದ ಮಹಿಳೆಯರ 200 ಮೀಟರ್ ವೈಯಕ್ತಿಕ ಕಂಚಿನ ಪದಕ ಹಾಗೂ ಕರ್ನಾಟಕ ತಂಡ ಗೆದ್ದಿದ್ದ 4x100 ಮೀಟರ್ ರಿಲೇ ಚಿನ್ನದ ಪದಕವನ್ನು ಕಳೆದುಕೊಳ್ಳಬೇಕಾಗಬಹುದು.
ರಾಜ್ಯ ಚಾಂಪಿಯನ್ಶಿಪ್ನಲ್ಲಿ ಪ್ರಕೃತಿ ತೋರಿದ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ಅಂತರ-ರಾಜ್ಯ ಕೂಟಕ್ಕೆ ಆಯ್ಕೆ ಮಾಡಲಾಗಿತ್ತು.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಬಿಡುಗಡೆ ಮಾಡಿರುವ ನೂತನ ತಾತ್ಕಾಲಿಕ ಅಮಾನತು ಪಟ್ಟಿಯಲ್ಲಿರುವ ಎಂಟು ಅಥ್ಲೀಟ್ಗಳಲ್ಲಿ ಪ್ರಕೃತಿ ಕೂಡ ಒಬ್ಬರಾಗಿದ್ದಾರೆ. ಕ್ವಾರ್ಟರ್ಮೈಲರ್ ಕೌಶಲ್ ಕುಮಾರ್, ಸ್ಟೀಪಲ್ಚೇಸರ್ ಜುಝಾರ್ ಸಿಂಗ್ ಹಾಗೂ ದೂರ ಓಟಗಾರ್ತಿ ಬಲ್ಜೀತ್ ಕೌರ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.






