ಥಾಯ್ಲೆಂಡ್ ಓಪನ್: ಕೆ.ಶ್ರೀಕಾಂತ್, ಸುಬ್ರಮಣಿಯನ್ ಕ್ವಾರ್ಟರ್ ಫೈನಲ್ಗೆ

ಕೆ.ಶ್ರೀಕಾಂತ್ | PC : X
ಬ್ಯಾಂಕಾಕ್: ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಎಸ್. ಸುಬ್ರಮಣಿಯನ್ ಥಾಯ್ಲೆಂಡ್ ಮಾಸ್ಟರ್ಸ್ ಬಿಡಬ್ಲ್ಯುಎಫ್ ಸೂಪರ್-300 ಟೂರ್ನಮೆಂಟ್ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗುರುವಾರ ಕೇವಲ 42 ನಿಮಿಷಗಳಲ್ಲಿ ಕೊನೆಗೊಂಡಿರುವ 2ನೇ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್ ಆಟಗಾರ ಶ್ರೀಕಾಂತ್ ಹಾಂಕಾಂಗ್ನ 20ರ ಹರೆಯದ ಜೇಸನ್ ಗುನಾವನ್ರನ್ನು 21-19, 21-15 ನೇರ ಗೇಮ್ಗಳ ಅಂತರದಿಂದ ಮಣಿಸಿದರು. ಶ್ರೀಕಾಂತ್ ಅವರು ಜೇಸನ್ ವಿರುದ್ಧ 2ನೇ ಗೆಲುವು ದಾಖಲಿಸಿದರು. ಕಳೆದ ವರ್ಷ ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ಶಿಪ್ಸ್ನಲ್ಲಿ ಜೇಸನ್ಗೆ ಸೋಲುಣಿಸಿದ್ದರು.
ಇದೇ ವೇಳೆ ಯುವ ಆಟಗಾರ ಸುಬ್ರಮಣಿಯನ್ ಇಂಡೋನೇಶ್ಯದ ಚಿಕೊ ಔರಾ ಡ್ವಿ ವಾರ್ಡೊಯೊರ ಕಠಿಣ ಸವಾಲನ್ನು ಮೆಟ್ಟಿ ನಿಂತರು. ಮೊದಲ ಗೇಮ್ ಸೋತ ನಂತರ ಪ್ರಬಲ ಪ್ರತಿರೋಧ ಒಡ್ಡಿದ ಸುಬ್ರಮಣಿಯನ್ 9-21, 21-10, 21-17 ಗೇಮ್ಗಳ ಅಂತರದಿಂದ ಜಯಶಾಲಿಯಾದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಕಪೂರ್ ಹಾಗೂ ಋತ್ವಿಕಾ, ಥಾಯ್ಲೆಂಡ್ನ ರಾಟ್ಚಾಪೋಲ್ ಮಕ್ಕಸಸಿಥೋರ್ನ್ ಹಾಗೂ ನಟ್ಟಮೊನ್ ಲೈಸುವಾನ್ ವಿರುದ್ಧ 19-21, 15-21 ಅಂತರದಿಂದ ಸೋತಿದ್ದಾರೆ.





