ಥಾಯ್ಲೆಂಡ್ ಓಪನ್: ಸೆಮಿಫೈನಲ್ಗೆ ಲಗ್ಗೆ ಇಟ್ಟ ಸಾತ್ವಿಕ್-ಚಿರಾಗ್ ಜೋಡಿ

Photo Credit : PTI
ಬ್ಯಾಂಕಾಕ್, ಮೇ 15: ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ಪುರಷರ ಡಬಲ್ಸ್ ವಿಭಾಗದಲ್ಲಿ ಶುಕ್ರವಾರ ಅಗ್ರ ಶ್ರೇಯಾಂಕದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಜಪಾನ್ ಎದುರಾಳಿಗಳನ್ನು ಸುಲಭವಾಗಿ ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಆದರೆ, ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ಸಾತ್ವಿಕ್-ಚಿರಾಗ್ ಜೋಡಿಯು ಆರನೇ ಶ್ರೇಯಾಂಕದ ಜಪಾನ್ನ ಟಕುಮಿ ನೊಮುರಾ ಮತ್ತು ಯುಯಿಚಿ ಶಿಮೊಗಾಮಿ ವಿರುದ್ಧ 21-12, 21-13 ಅಂತರದ ಭರ್ಜರಿ ಜಯ ಸಾಧಿಸಿತು. ಈ ಮೂಲಕ 2026ರಲ್ಲಿ ಮೊದಲ ಬಾರಿಗೆ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಟೂರ್ನಿಯೊಂದರ ಅಂತಿಮ ನಾಲ್ಕರ ಘಟ್ಟ ತಲುಪಿತು.
2024ರ ನಂತರ ತಮ್ಮ ಮೊದಲ ಪ್ರಶಸ್ತಿಯ ಹುಡುಕಾಟದಲ್ಲಿರುವ ವಿಶ್ವದ 4ನೇ ರ್ಯಾಂಕಿಂಗ್ನ ಈ ಜೋಡಿ, ಸೆಮಿಫೈನಲ್ನಲ್ಲಿ ಮಲೇಶ್ಯದ ಗೋ ಸೀ ಫೀ - ನೂರ್ ಇಝುದ್ದೀನ್ ಅಥವಾ ಸ್ಕಾಟ್ಲ್ಯಾಂಡ್ನ ಕ್ರಿಸ್ಟೋಫರ್ - ಮ್ಯಾಥ್ಯೂ ಗ್ರಿಮ್ಲಿ ಜೋಡಿಯನ್ನು ಎದುರಿಸಲಿದೆ.
ಸಿಂಧು ಹೋರಾಟ ಅಂತ್ಯ:
ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ, ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧುರನ್ನು ಜಪಾನ್ನ ಅಕಾನೆ ಯಮಗುಚಿ 19-21, 21-18, 21-15 ಗೇಮ್ಗಳಿಂದ ಸೋಲಿಸಿದರು.
ಮೊದಲ ಗೇಮ್ನಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 19-19 ಸಮಬಲದ ಹಂತದಲ್ಲಿ ಸತತ ಎರಡು ಅಂಕ ಗೆದ್ದ ಸಿಂಧು ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್ನ ಮೊದಲಾರ್ಧದಲ್ಲಿ 4 ಅಂಕಗಳ ಮುನ್ನಡೆ ಹೊಂದಿದ್ದ ಸಿಂಧು, ನಂತರ ಮಾಡಿದ ಸರಣಿ ತಪ್ಪುಗಳಿಂದಾಗಿ ಹಿನ್ನಡೆ ಅನುಭವಿಸಿದರು. ವಿಶ್ವದ 3ನೇ ರ್ಯಾಂಕಿಂಗ್ನ ಯಮಗುಚಿ ಸತತ 7 ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ನಿರ್ಣಾಯಕ ಮೂರನೇ ಗೇಮ್ನಲ್ಲಿ, ಯಮಗುಚಿ ಸಂಪೂರ್ಣ ಪ್ರಾಬಲ್ಯ ಮೆರೆದರು. 61 ನಿಮಿಷಗಳ ಸುದೀರ್ಘ ಹೋರಾಟದ ನಂತರ ಸಿಂಧು ಪಂದ್ಯ ಕೈಚೆಲ್ಲಿದರು.






