ಅಕ್ಟೋಬರ್ 15ರಂದು ನಿಗದಿಯಾಗಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ

ಹೊಸದಿಲ್ಲಿ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ. ಪಂದ್ಯವನ್ನು ಮೂಲತಃ ಅಕ್ಟೋಬರ್ 15 ರಂದು ಅಹಮದಾಬಾದ್ ನಲ್ಲಿ ನಿಗದಿಪಡಿಸಲಾಗಿತ್ತು.
ಐಸಿಸಿ ನವರಾತ್ರಿಯ ಮೊದಲ ದಿನದಂದು ಪಂದ್ಯವನ್ನು ನಿಗದಿಪಡಿಸಿದೆ, ಗುಜರಾತ್ ನಾದ್ಯಂತ ಗಾರ್ಬಾ ನೃತ್ಯಗಳೊಂದಿಗೆ ಆಚರಿಸಲಾಗುವ ಮಹತ್ವದ ಹಬ್ಬ ಇದಾಗಿದೆ. ಭದ್ರತೆಯ ಕಾರಣದಿಂದ ಬಿಸಿಸಿಐಗೆ ಪ್ರಯಾಣದ ವೇಳಾಪಟ್ಟಿಯನ್ನು ಮರುಪರಿಶೀಲಿಸುವಂತೆ ಸೂಚಿಸಲಾಗಿದೆ. ವೇಳಾಪಟ್ಟಿಯನ್ನು ಬದಲಿಸುವುದರಿಂದ ಈಗಾಗಲೇ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಪ್ರಯಾಣದ ಯೋಜನೆ ಹಾಕಿ, ಟಿಕೆಟ್ ಗಳನ್ನು ಕಾಯ್ದಿರಿಸಿದ ಕ್ರಿಕೆಟೆ್ ಅಭಿಮಾನಿಗಳಿಗೆ ಸಮಸ್ಯೆ ಸೃಷ್ಟಿಸಬಹುದು
ನವರಾತ್ರಿ ಹಬ್ಬದ ಕಾರಣ ದಿನಾಂಕವನ್ನು ಬದಲಾಯಿಸುವಂತೆ ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ ಎಚ್ಚರಿಕೆ ನೀಡಿರುವುದರಿಂದ ಭಾರತ ಹಾಗೂ ಪಾಕಿಸ್ತಾನದ ವಿಶ್ವಕಪ್ ಪಂದ್ಯದ ದಿನಾಂಕ ಬದಲಾಗಬಹುದು.
ಈ ಬಗ್ಗೆ ಏಜೆನ್ಸಿಗಳು ನಮಗೆ ತಿಳಿಸಿದ್ದು, ನಾವು ಶೀಘ್ರದಲ್ಲೇ ಚರ್ಚೆಯಲ್ಲಿದ್ದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮೂಲಗಳು ತಿಳಿಸಿವೆ.
ಇದು ಸುಲಭದ ಕೆಲಸವಲ್ಲ, ಯಾವುದೇ ಪಂದ್ಯದ ಹಿಂದೆ ಹಲವಾರು ವಿಷಯಗಳಿವೆ. ಆದ್ದರಿಂದ ಪ್ರತಿಯೊಂದನ್ನೂ ನೋಡಿಕೊಳ್ಳಬೇಕು. ಅಂತಿಮ ಚರ್ಚೆ ಮಾಡೋಣ, ನಂತರ ಮಾತ್ರ ಪ್ರತಿಕ್ರಿಯಿಸಬಹುದು. ಆದರೆ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ಬದಲಾಯಿಸಲು ಅಗತ್ಯವಿದ್ದರೆ ಅದನ್ನು ಮಾಡುತ್ತೇವೆ ಎಂದು ಮೂಲಗಳು India Today ಗೆ ತಿಳಿಸಿವೆ.
1 ಲಕ್ಷ ಆಸನದ ಸಾಮರ್ಥ್ಯದ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಮ್ ನ್ಯೂಝಿಲ್ಯಾಂಡ್- ಇಂಗ್ಲೆಂಡ್, ಭಾರತ-ಪಾಕಿಸ್ತಾನ ಹಾಗೂ ಇಂಗ್ಲೆಂಡ್-ಆಸ್ಟ್ರೇಲಿಯ ಹಾಗೂ ಫೈನಲ್ ಸಹಿತ 4 ಪಂದ್ಯಗಳ ಆತಿಥ್ಯವಹಿಸಿಕೊಂಡಿದೆ.







