ನಾಳೆ(ಜ.18) ನ್ಯೂಝಿಲ್ಯಾಂಡ್ ವಿರುದ್ಧದ ಕೊನೆಯ ಏಕದಿನ | ಭಾರತದ ಚಿತ್ತ ಸರಣಿ ಗೆಲುವಿನತ್ತ

Photo Credit : PTI
ಇಂದೋರ್, ಜ. 17: ಭಾರತ ಮತ್ತು ಪ್ರವಾಸಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಸರಣಿ ನಿರ್ಣಾಯಕ ಮೂರನೇ ಹಾಗೂ ಕೊನೆಯ ಪಂದ್ಯವು ಇಂದೋರ್ನ ಹೋಳ್ಕರ್ ಸ್ಟೇಡಿಯಮ್ನಲ್ಲಿ ರವಿವಾರ ನಡೆಯಲಿದೆ. ಸರಣಿಯು ಈಗ 1-1ರಲ್ಲಿ ಸಮಬಲಗೊಂಡಿದ್ದು, ನಾಳಿನ ಪಂದ್ಯವು ನಿರ್ಣಾಯಕವಾಗಿದೆ.
ಸರಣಿಯ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ಎರಡನೇ ಪಂದ್ಯವನ್ನು ಕಳೆದುಕೊಂಡಿದೆ. ಈಗ ನಿರ್ಣಾಯಕ ಮೂರನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶಪಡಿಸಿಕೊಳ್ಳುವತ್ತ ಅಡಿ ಇಟ್ಟಿದೆ. ಪಂದ್ಯದ ಫಲಿತಾಂಶವು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ನಿರ್ವಹಣೆಯನ್ನು ಅವಲಂಬಿಸಿದೆ.
ನ್ಯೂಝಿಲ್ಯಾಂಡ್ ಹಿಂದೆ ಭಾರತದಲ್ಲಿ ಟೆಸ್ ಸರಣಿಯೊಂದನ್ನು ಗೆಲ್ಲುವ ಸನಿಹಕ್ಕೂ ಬಂದಿರಲಿಲ್ಲ. ಆದರೆ, ಅದು ಕಳೆದ ವರ್ಷ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತದಲ್ಲೇ ಕ್ಲೀನ್ಸ್ವೀಪ್ ಮಾಡಿತ್ತು. ಅಂಥದೇ ಅದ್ಭುತವನ್ನು ಏಕದಿನದ ಸರಣಿಯಲ್ಲಿ ಪುನರಾವರ್ತಿಸುವುದನ್ನು ಅದು ಎದುರು ನೋಡುತ್ತಿದೆ.
ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆ ತಂಡವನ್ನು ಸೋಲಿಸಲು ನ್ಯೂಝಿಲ್ಯಾಂಡ್ಗೆ ಈವರೆಗೆ ಸಾಧ್ಯವಾಗಿಲ್ಲ. ವಾಸ್ತವವಾಗಿ, ದ್ವಿಪಕ್ಷೀಯ ಸರಣಿಯಾಗಲಿ, ಇತರ ಯಾವುದೇ ಪಂದ್ಯಾವಳಿಯಾಗಲಿ ಭಾರತದಲ್ಲಿ ನಡೆದ ಏಕದಿನ ಸರಣಿಯೊಂದನ್ನು ಗೆಲ್ಲಲು ನ್ಯೂಝಿಲ್ಯಾಂಡ್ಗೆ ಈವರೆಗೆ ಸಾಧ್ಯವಾಗಿಲ್ಲ.
ಭಾರತದ ಮಟ್ಟಿಗೆ, ಅರ್ಶದೀಪ್ ಸಿಂಗ್ರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇದು ಏಕದಿನ ಸರಣಿಯ ನಿರ್ಣಾಯಕ ಪಂದ್ಯವಾಗಿರುವುದರಿಂದ ಹಾಗೂ ಆ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿರುವುದರಿಂದ ಈ ಹಂತದಲ್ಲಿ ಅರ್ಶದೀಪ್ರನ್ನು ಒಳಗೆ ತರಲು ಭಾರತೀಯ ಏಕದಿನ ತಂಡದಿಂದ ಯಾರನ್ನಾದರೂ ಕೈಬಿಡುವ ಸಾಧ್ಯತೆ ಕಡಿಮೆ.
ಹೋಳ್ಕರ್ ಸ್ಟೇಡಿಯಮ್ನ ಬೌಂಡರಿಗಳು ಚಿಕ್ಕದಾಗಿರುವುದರಿಂದ ಭಾರತವು ನಿತೀಶ್ ಕುಮರ್ ರೆಡ್ಡಿಯನ್ನೇ ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಅವರ ಬದಲಿಗೆ ಆಯುಶ್ ಬದೋನಿಯನ್ನು ತರುವ ಸಾಧ್ಯತೆ ಕಡಿಮೆಯಾಗಿದೆ.
ತಂಡಗಳು
ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್ (ಉಪನಾಯಕ), ರವೀಂದ್ರ ಜಡೇಜ, ಮುಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಕುಲದೀಪ್ ಯಾದವ್, ನಿತೀಶ್ಕುಮಾರ್ ರೆಡ್ಡಿ.
ನ್ಯೂಝಿಲ್ಯಾಂಡ್: ಮೈಕೆಲ್ ಬ್ರೇಸ್ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೇವನ್ ಕಾನ್ವೇ (ವಿಕೆಟ್ಕೀಪರ್), ಝ್ಯಾಕ್ ಫೋಕ್ಸ್, ಮಿಚ್ ಹೇ (ವಿಕೆಟ್ಕೀಪರ್), ಕೈಲ್ ಜೇಮೀಸನ್, ನಿಕ್ ಕೆಲ್ಲಿ, ಜೇಡನ್ ಲೆನೋಕ್ಸ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.







