ಆಟಗಾರರ ತಲೆಯಲ್ಲಿ ಕ್ರಿಕೆಟ್ ಬಿಟ್ಟು ಬೇರೆ ಯೋಚನೆ ಇಲ್ಲ : ಭಾರತೀಯ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್

Photo Credit: PTI
ದುಬೈ, ಸೆ. 13: ಕ್ರಿಕೆಟಿಗರ ಕೆಲಸ ಆಟದ ಮೇಲೆ ಗಮನ ಹರಿಸುವುದಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಹೇಳಿದ್ದಾರೆ. ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ರವಿವಾರ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಕೆಲವರು ಕರೆ ನೀಡಿರುವ ನಡುವೆ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಂಘರ್ಷ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿದೆಯಾದರೂ, ಈ ವರ್ಷದ ಎಪ್ರಿಲ್ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭೀಕರ ದಾಳಿ ನಡೆಸಿ 26 ಮಂದಿ ಪ್ರವಾಸಿಗಳನ್ನು ಹತ್ಯೆಗೈದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಮೇ ತಿಂಗಳ ಆದಿ ಭಾಗದಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದಾಗ, ಉಭಯ ದೇಶಗಳ ನಡುವೆ ನಾಲ್ಕು ದಿನಗಳ ಸೇನಾ ಸಂಘರ್ಷವೂ ನಡೆದಿದೆೆ. ಅಂದಿನಿಂದ ಉಭಯ ದೇಶಗಳ ನಡುವಿನ ಸಂಬಂಧ ಬಿಗುವಿನಿಂದ ಕೂಡಿದೆ.
‘‘ಒಮ್ಮೆ ನಾವು ಆಡಲು ಇಲ್ಲಿಗೆ ಬಂದಾಗ, ಆಟಗಾರರು ಕ್ರಿಕೆಟ್ ಮೇಲೆ ಮಾತ್ರ ಗಮನ ಹರಿಸುತ್ತಾರೆ’’ ಎಂದು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಟಕ್ ಹೇಳಿದರು. ‘‘ಕ್ರಿಕೆಟ್ ಆಡುವುದನ್ನು ಹೊರತುಪಡಿಸಿ ಅವರ ತಲೆಯಲ್ಲಿ ಬೇರೆ ಏನಾದರೂ ಇರುತ್ತದೆ ಎಂದು ನನಗೆ ಅನಿಸುವುದಿಲ್ಲ. ಅದರ ಬಗ್ಗೆ ಮಾತ್ರ ನಾವು ಗಮನ ಹರಿಸುತ್ತೇವೆ’’ ಎಂದು ಅವರು ನುಡಿದರು.





