ಮೂರನೇ ಪಂದ್ಯ| ವೆಸ್ಟ್ಇಂಡೀಸ್ ವಿರುದ್ಧ ಭರ್ಜರಿ ಜಯ: ನ್ಯೂಝಿಲ್ಯಾಂಡ್ ಮಡಿಲಿಗೆ ಟೆಸ್ಟ್ ಸರಣಿ

Photo Credit : AP \ PTI
ಮೌಂಟ್ಮೌಂಗ್ನುಯಿ, ಡಿ.22: ಅತ್ಯುತ್ತಮ ಪ್ರದರ್ಶನ ನೀಡಿದ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಸೋಮವಾರ ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು 323 ರನ್ಗಳ ಅಂತರದಿಂದ ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ವೇಗದ ಬೌಲರ್ ಜೇಕಬ್ ಡಫಿ ಐದು ವಿಕೆಟ್ ಗೊಂಚಲು ಕಬಳಿಸುವ ಮೂಲಕ ವಿಂಡೀಸ್ನ ದಿಢೀರ್ ಕುಸಿತಕ್ಕೆ ಕಾರಣರಾದರು.
ಗೆಲ್ಲಲು 432 ರನ್ ಗುರಿ ಪಡೆದಿದ್ದ ವೆಸ್ಟ್ಇಂಡೀಸ್ ತಂಡ ನಾಲ್ಕನೇ ದಿನದಾಟವಾದ ಸೋಮವಾರ 80.3 ಓವರ್ಗಳಲ್ಲಿ ಕೇವಲ 138 ರನ್ ಗಳಿಸಿ ಆಲೌಟಾಯಿತು. ಡಫಿ 42 ರನ್ಗೆ ಐದು ವಿಕೆಟ್ ಗೊಂಚಲು ಪಡೆದರು. ಸ್ಪಿನ್ನರ್ ಅಜಾಝ್ ಪಟೇಲ್ 23 ರನ್ ವೆಚ್ಚಕ್ಕೆ ಮೂರು ವಿಕೆಟ್ಗಳನ್ನು ಕಬಳಿಸಿ ಬೌನ್ಸ್ ಆಗುತ್ತಿದ್ದ ಪಿಚ್ನಲ್ಲಿ ಮೇಲುಗೈ ಸಾಧಿಸಿದರು.
ಈ ಸೋಲಿನ ಮೂಲಕ ವಿಂಡೀಸ್ ತಂಡವು ನ್ಯೂಝಿಲ್ಯಾಂಡ್ ಕ್ರಿಕೆಟ್ ಪ್ರವಾಸವನ್ನು ನಿರಾಶಾದಾಯಕವಾಗಿ ಅಂತ್ಯಗೊಳಿಸಿತು.
ಕ್ರೈಸ್ಟ್ ಚರ್ಚ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಡ್ರಾಗೊಳಿಸಿದ್ದ ವೆಸ್ಟ್ಇಂಡೀಸ್ ತಂಡವು ವೆಲ್ಲಿಂಗ್ಟನ್ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ವನ್ನು ಸುಲಭವಾಗಿ ಗೆದ್ದುಕೊಂಡು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.
ಐದನೇ ಹಾಗೂ ಕೊನೆಯ ದಿನವಾದ ಸೋಮವಾರ ವೆಸ್ಟ್ಇಂಡೀಸ್ ತಂಡವು ವಿಕೆಟ್ ನಷ್ಟವಿಲ್ಲದೆ 43 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಆರಂಭಿಸಿತು. ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ 96 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 67 ರನ್ ಗಳಿಸಿ ಸರ್ವಾಧಿಕ ಸ್ಕೋರ್ ಗಳಿಸಿದರು.
ಆದರೆ ಪಾನೀಯ ವಿರಾಮದ ನಂತರ ಪಂದ್ಯವು ತಿರುವು ಪಡೆಯಿತು. ವಿಕೆಟ್ ನಷ್ಟವಿಲ್ಲದೆ 87 ರನ್ ಗಳಿಸಿದ್ದ ವಿಂಡೀಸ್ 112 ರನ್ ತಲುಪಿದಾಗ 8 ವಿಕೆಟ್ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ನಂತರ ಅದು ಚೇತರಿಸಿಕೊಳ್ಳಲಿಲ್ಲ.
ಡಫಿ ಅವರು ಆರಂಭಿಕ ಆಟಗಾರರಾದ ಕಿಂಗ್ ಹಾಗೂ ಕ್ಯಾಂಪ್ಬೆಲ್ ನಡುವಿನ 87 ರನ್ ಜೊತೆಯಾಟವನ್ನು ಮುರಿದರು. ಕಿಂಗ್ ಅವರು ಡಫಿ ಅವರ ಎಸೆತವನ್ನು ಕೆಣಕಲು ಹೋಗಿ ಗ್ಲೆನ್ ಫಿಲಿಪ್ಗೆ ಕ್ಯಾಚ್ ನೀಡಿದರು.
ಜಾನ್ ಕ್ಯಾಂಪ್ಬೆಲ್(16 ರನ್)ವಿಕೆಟನ್ನು ಉರುಳಿಸಿದ ಅಜಾಝ್ಪಟೇಲ್ ಕಿವೀಸ್ಗೆ ಮೇಲುಗೈ ಒದಗಿಸಿದರು. ಎಡಗೈ ಸ್ಪಿನ್ನರ್ ಪಟೇಲ್ ಮೊದಲ ಇನಿಂಗ್ಸ್ನಲ್ಲಿ ಶತಕ ಗಳಿಸಿರುವ ಕಾವೆಮ್ ಹಾಜ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.
ಅಲಿಕ್ ಅಥನಾಝ್(2 ರನ್) ಹಾಗೂ ಜಸ್ಟಿನ್ ಗ್ರೀವ್ಸ್ (0)ವಿಕೆಟ್ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿದ ಡಫಿ ಅವರು ವಿಂಡೀಸ್ನ ಮಧ್ಯಮ ಸರದಿಯನ್ನು ಭೇದಿಸಿದರು. ವೆಸ್ಟ್ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಐದು ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಸರಣಿಯಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದರು. ಚೇಸ್ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 7ರ ಸರಾಸರಿಯಲ್ಲಿ ಕೇವಲ 42 ರನ್ ಗಳಿಸಿದರು.
ಪಟೇಲ್ ಅವರು ಶಾಯ್ ಹೋಪ್(3 ರನ್)ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೇಮರ್ ರೋಚ್(4 ರನ್)ಅವರಿಗೆ ಗ್ಲೆನ್ ಫಿಲಿಪ್ಸ್ ಪೆವಿಲಿಯನ್ ಹಾದಿ ತೋರಿಸಿದರು.
ಡಫಿ ಹಾಗೂ ರವೀಂದ್ರ ಜಡೇಜ ಕೊನೆಯ ಎರಡು ವಿಕೆಟ್ಗಳನ್ನು ಉರುಳಿಸಿ ವಿಂಡೀಸ್ ಇನಿಂಗ್ಸ್ಗೆ ತೆರೆ ಎಳೆದರು.
ಸರಣಿಯಲ್ಲಿ ಒಟ್ಟು 23 ವಿಕೆಟ್ಗಳು ಹಾಗೂ 42 ರನ್ ಗಳಿಸಿರುವ ಜೇಕಬ್ ಡಫಿ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದರು. ಪಂದ್ಯದಲ್ಲಿ ಒಟ್ಟು 327 ರನ್ ಗಳಿಸಿರುವ ಡೆವೊನ್ ಕಾನ್ವೆ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಕಿವೀಸ್ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ವಿಕೆಟ್ಗಳನ್ನು ಕಬಳಿಸಿದ ಜೇಕಬ್ ಡಫಿ ಅವರು ಸರ್ ರಿಚರ್ಡ್ ಹ್ಯಾಡ್ಲೀ ದಾಖಲೆಯನ್ನು ಮುರಿದರು.
ಮೂರನೇ ಟೆಸ್ಟ್ನಲ್ಲಿ ನ್ಯೂಝಿಲ್ಯಾಂಡ್ನ ಆರಂಭಿಕ ಆಟಗಾರರು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಡೆವೊನ್ ಕಾನ್ವೆ 227 ಹಾಗೂ 100 ರನ್ ಗಳಿಸಿದರು. ನಾಯಕ ಟಾಮ್ ಲ್ಯಾಥಮ್ 137 ಹಾಗೂ 101 ರನ್ ಕಲೆ ಹಾಕಿದರು. ಒಂದೇ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಗಳಿಸಿದ ಮೊದಲ ಆರಂಭಿಕ ಜೋಡಿ ಎಂಬ ಕೀರ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 575/8 ಡಿಕ್ಲೇರ್
ವೆಸ್ಟ್ಇಂಡೀಸ್ ಮೊದಲ ಇನಿಂಗ್ಸ್: 420 ರನ್ಗೆ ಆಲೌಟ್
ನ್ಯೂಝಿಲ್ಯಾಂಡ್ ಎರಡನೇ ಇನಿಂಗ್ಸ್: 306/2 ಡಿಕ್ಲೇರ್
ವೆಸ್ಟ್ಇಂಡೀಸ್ ಎರಡನೇ ಇನಿಂಗ್ಸ್: 138 ರನ್ಗೆ ಆಲೌಟ್
(ಬ್ರೆಂಡನ್ ಕಿಂಗ್ 67, ಜೇಕಬ್ ಡಫಿ 5-42, ಅಜಾಝ್ ಪಟೇಲ್ 3-23)
ಪಂದ್ಯಶ್ರೇಷ್ಠ: ಡೆವೊನ್ ಕಾನ್ವೆ
ಸರಣಿಶ್ರೇಷ್ಠ: ಜೇಕಬ್ ಡಫಿ
...........
ನ್ಯೂಝಿಲ್ಯಾಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದವರು
25 ವಿಕೆಟ್-ವಸೀಂ ಅಕ್ರಂ, ನ್ಯೂಝಿಲ್ಯಾಂಡ್ ವಿರುದ್ಧ 1994ರಲ್ಲಿ
24 ವಿಕೆಟ್-ಎರ್ರಪಲ್ಲಿ ಪ್ರಸನ್ನ, ನ್ಯೂಝಿಲ್ಯಾಂಡ್ ವಿರುದ್ಧ 1968ರಲ್ಲಿ
24 ವಿಕೆಟ್-ರಿಯಾನ್ ಸೀಡ್ಬಾಟಮ್, ನ್ಯೂಝಿಲ್ಯಾಂಡ್ ವಿರುದ್ಧ, 2008ರಲ್ಲಿ
23-ಜೇಕಬ್ ಡಫಿ, ವೆಸ್ಟ್ಇಂಡೀಸ್ ವಿರುದ್ಧ, 2025ರಲ್ಲಿ
21-ವೆರ್ನಾನ್ ಫಿಲ್ಯಾಂಡರ್, ನ್ಯೂಝಿಲ್ಯಾಂಡ್ ವಿರುದ್ಧ 2012ರಲ್ಲಿ







