ಮೂರನೇ ಟಿ-20 ಪಂದ್ಯ | ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ ಟೀಮ್ ಇಂಡಿಯಾ

ಸಾಂದರ್ಭಿಕ ಚಿತ್ರ | Photo Credit : PTI
ವೆಲ್ಲಿಂಗ್ಟನ್, ಅ. 27: ಐದು ಪಂದ್ಯಗಳ ಟಿ-20 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಮಂಗಳವಾರ ಮೂರನೇ ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ಜಯಿಸಿ ಹ್ಯಾಟ್ರಿಕ್ ಸಾಧಿಸಿ, ಸರಣಿಯಲ್ಲಿ ಬಿಗಿ ಹಿಡಿತ ಸಾಧಿಸುವ ವಿಶ್ವಾಸದಲ್ಲಿದೆ.
ವಿಶ್ವಕಪ್ ನಲ್ಲಿ ರನ್ನರ್ಅಪ್ ಆಗಿರುವ ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವ ಚಾಂಪಿಯನ್ ಭಾರತ ತಂಡ ಈ ತನಕ ಆಡಿರುವ ಎರಡೂ ಪಂದ್ಯಗಳನ್ನು ಜಯಿಸಿದೆ. ನ್ಯೂಝಿಲ್ಯಾಂಡ್ ವಿರುದ್ಧ ಆಡಿರುವ ಹಿಂದಿನ 10 ಪಂದ್ಯಗಳಲ್ಲಿ 9ರಲ್ಲಿ ಗೆಲುವು ದಾಖಲಿಸಿದೆ.
ಕ್ರೈಸ್ಟ್ಚರ್ಚ್ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತವು ಇದೀಗ ವೆಲ್ಲಿಂಗ್ಟನ್ಗೆ ಆಗಮಿಸಿದೆ. ಇಲ್ಲಿನ ಸ್ಟೇಡಿಯಂನಲ್ಲಿ ಬೌಂಡರಿಗಳು ಚಿಕ್ಕದಾಗಿವೆ. ಭಾರತವು ತನ್ನ ಬೌಲಿಂಗ್ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದರೆ ಮುನ್ನಡೆ ಸಾಧಿಸಬಹುದು.
ಭಾರತ ತಂಡದ ವಿರುದ್ಧ ಹಿಂದಿನ ಎರಡು ಸ್ವದೇಶಿ ಸರಣಿಗಳನ್ನು ಸೋತಿರುವ ನ್ಯೂಝಿಲ್ಯಾಂಡ್ ತಂಡವು ಸರಣಿಯಲ್ಲಿ ಹ್ಯಾಟ್ರಿಕ್ ಸೋಲಿನಿಂದ ಪಾರಾಗುವ ವಿಶ್ವಾಸದಲ್ಲಿದೆ. ಈ ಪಂದ್ಯವು ಕಿವೀಸ್ ಪಾಲಿಗೆ ಮಾಡು-ಮಡಿ ಪಂದ್ಯವಾಗಿದೆ.
ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ನ್ಯೂಝಿಲ್ಯಾಂಡ್ನ ನೀಳಕಾಯದ ಸ್ಪಿನ್ನರ್ಗಳಾದ ಮಿಚೆಲ್ ಸ್ಯಾಂಟ್ನರ್ ಹಾಗೂ ಮೈಕಲ್ ಬ್ರೆಸ್ವೆಲ್ ಒಟ್ಟಿಗೆ 16 ಓವರ್ಗಳ ಬೌಲಿಂಗ್ ಮಾಡಿ 132 ರನ್ ಬಿಟ್ಟುಕೊಟ್ಟಿದ್ದಾರೆ. ಎಂಟು ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತ ತಂಡವು ಕೇವಲ ಓರ್ವ ಸ್ಪೆಷಲಿಸ್ಟ್ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಆಡಿಸುತ್ತಿದೆ. ಅವರು 10 ಓವರ್ಗಳ ಬೌಲಿಂಗ್ ಮಾಡಿದ್ದಾರೆ.
ಟೀಮ್ ನ್ಯೂಸ್:
ಸೂರ್ಯವಂಶಿಗೆ ಮತ್ತೊಂದು ಅವಕಾಶ
ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದಾಗಿ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಖಚಿತ. ಪೂರ್ಣಕಾಲಿಕ ಬೌಲರ್ ಬದಲಿಗೆ ಭಾರತವು ಎಂಟನೇ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿಯನ್ನು ಅವಲಂಬಿಸಿದೆ. ಅವರು ಎರಡು ಬಾರಿ 19ನೇ ಓವರ್ ಎಸೆದಿದ್ದರು.
ಕಳೆದ ಪಂದ್ಯದಲ್ಲಿ ಎರಡು ಓವರ್ ಬೌಲಿಂಗ್ ಮಾಡಿದ್ದ ಮ್ಯಾಟ್ ಹೆನ್ರಿ, ಎರಡು ಮಾದರಿಯ ಕ್ರಿಕೆಟ್ಗಳನ್ನು ಗಮನದಲ್ಲಿಟ್ಟುಕೊಂಡು ಟಿ-20 ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆ್ಯಡಮ್ ಮಿಲ್ನೆ, ಬ್ಲೈರ್ ಟಿಕ್ನೆರ್ ಹಾಗೂ ಕೈಲ್ ಜಮೀಸನ್ ಮೂರನೇ ಪಂದ್ಯದಲ್ಲಿ ಆಡಲಿದ್ದಾರೆ.
ಪಿಚ್ ಹಾಗೂ ವಾತಾವರಣ
ವೆಲ್ಲಿಂಗ್ಟನ್ನಲ್ಲಿ ಈ ಹಿಂದೆ ನಡೆದಿದ್ದ ಟಿ-20 ಪಂದ್ಯದಲ್ಲಿ 164 ರನ್ ಗಳಿಸಿದ ತಂಡ ಜಯಶಾಲಿಯಾಗಿತ್ತು. ಇದೇ ಮೈದಾನದಲ್ಲಿ 216 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಲಾಗಿತ್ತು. ಪಂದ್ಯಕ್ಕೂ ಮೊದಲು ಜೋರಾಗಿ ಗಾಳಿ ಬೀಸಬಹುದು. ಮಳೆ ಸುರಿಯುವ ಸಾಧ್ಯತೆಯೂ ಇದೆ.
ತಂಡಗಳು
ಭಾರತ (ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), 3. ವೈಭವ್ ಸೂರ್ಯವಂಶಿ, 4. ಶ್ರೇಯಸ್ ಅಯ್ಯರ್ (ನಾಯಕ), 5. ತಿಲಕ್ ವರ್ಮಾ, 6. ನಮನ್ ಧೀರ್, 7. ನಿತೀಶ್ ಕುಮಾರ್ ರೆಡ್ಡಿ, 8. ಅಕ್ಷರ್ ಪಟೇಲ್, 9. ಭುವನೇಶ್ವರ ಕುಮಾರ್, 10. ಪ್ರಿನ್ಸ್ ಯಾದವ್, 11. ಅರ್ಷದೀಪ್ ಸಿಂಗ್.
ನ್ಯೂಝಿಲ್ಯಾಂಡ್ (ಸಂಭಾವ್ಯ): 1. ಫಿನ್ ಅಲೆನ್, 2. ಟಿಮ್ ಸೀಫರ್ಟ್ (ವಿಕೆಟ್ಕೀಪರ್), 3. ಬೆವನ್ ಜೇಕಬ್ಸ್/ಡೆವೊನ್ ಕಾನ್ವೆ, 4. ಗ್ಲೆನ್ ಫಿಲಿಪ್ಸ್, 5. ಡ್ಯಾರಿಲ್ ಮಿಚೆಲ್, 6. ಮೈಕಲ್ ಬ್ರೆಸ್ವೆಲ್, 7. ಮಿಚೆಲ್ ಸ್ಯಾಂಟ್ನರ್ (ನಾಯಕ), 8. ನಾಥನ್ ಸ್ಮಿತ್, 9. ಕೈಲ್ ಜಮೀಸನ್, 10. ಆ್ಯಡಮ್ ಮಿಲ್ನೆ, 11. ಜೇಕಬ್ ಡಫಿ.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 12.30.






