ನಾಳೆ ಮೂರನೇ ಟಿ-20: ಭಾರತಕ್ಕೆ ಸರಣಿ ಗೆಲುವಿನ ತವಕ

PC : thehindu
ಗುವಾಹಟಿ, ಜ.24: ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಮ್ ಇಂಡಿಯಾ ರವಿವಾರ ಬರ್ಸಪಾರದ ಎಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟಿ-20 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಎದುರಿಸಲಿದ್ದು, ಸರಣಿ ಗೆಲುವಿನ ತವಕದಲ್ಲಿದೆ.
ರಾಯ್ಪುರದಲ್ಲಿ ನಡೆದಿರುವ ಎರಡನೇ ಪಂದ್ಯದಲ್ಲಿ 209 ರನ್ ಗುರಿಯನ್ನು ಕೇವಲ 15.2 ಓವರ್ಗಳಲ್ಲಿ ಬೆನ್ನಟ್ಟಿರುವ ಸೂರ್ಯಕುಮಾರ್ ಬಳಗ ಸ್ಪಷ್ಟ ಸಂದೇಶ ರವಾನಿಸಿದೆ. ಸುಲಭ ಜಯ ಸಾಧಿಸಿರುವ ಭಾರತ ತಂಡವು ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದೆ.
ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಕಿವೀಸ್ ಪಡೆ ಕಳಪೆ ಆರಂಭದಿಂದ ಚೇತರಿಸಿಕೊಂಡು 6 ವಿಕೆಟ್ಗಳ ನಷ್ಟಕ್ಕೆ 208 ರನ್ ಗಳಿಸಿತ್ತು. ರಚಿನ್ ರವೀಂದ್ರ(44 ರನ್)ಹಾಗೂ ನಾಯಕ ಸ್ಯಾಂಟ್ನರ್(ಔಟಾಗದೆ 47)ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾಗಿದ್ದರು.
ಭಾರತದ ನಾಯಕ ಸೂರ್ಯಕುಮಾರ್ ಔಟಾಗದೆ 82 ರನ್ ಗಳಿಸುವುದರೊಂದಿಗೆ 468 ದಿನಗಳ ನಂತರ ಮೊದಲ ಬಾರಿ ಟಿ-20 ಕ್ರಿಕೆಟ್ನಲ್ಲಿ ಅರ್ಧಶತಕ ಗಳಿಸಿದರು. ಸೂರ್ಯ ಸತತ 23 ಇನಿಂಗ್ಸ್ಗಳಲ್ಲಿ ಅರ್ಧಶತಕವನ್ನೇ ಗಳಿಸಿರಲಿಲ್ಲ. 2024ರ ಅಕ್ಟೋಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ದೊಡ್ಡ ಸ್ಕೋರ್ ಗಳಿಸಿದ್ದರು.
ಭಾರತದ ಪ್ರಮುಖ ಸ್ಪಿನ್ನರ್ ಕುಲದೀಪ ಯಾದವ್ ಮಧ್ಯಮ ಸರದಿಯಲ್ಲಿ ಕಿವೀಸ್ನ ಪ್ರಮುಖ ಬ್ಯಾಟರ್ಗಳನ್ನು ಔಟ್ ಮಾಡಿ ತನ್ನ ಶಕ್ತಿ ಪ್ರದರ್ಶಿಸಿದ್ದರು. 35 ರನ್ಗೆ ಎರಡು ವಿಕೆಟ್ಗಳನ್ನು ಪಡೆದಿದ್ದರು.
ವಿಕೆಟ್ಕೀಪರ್ ಇಶಾನ್ ಕಿಶನ್ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು, ಕಿವೀಸ್ ವಿರುದ್ಧ ವೇಗವಾಗಿ 50 ರನ್ ಗಳಿಸಿದ್ದರು. ಅಭಿಷೇಕ್ ಶರ್ಮಾ ದಾಖಲೆ(22 ಎಸೆತ)ಯನ್ನು ಮುರಿದಿದ್ದರು.
ಭಾರತ ತಂಡವು 10 ಓವರ್ನೊಳಗೆ ಎರಡು ವಿಕೆಟ್ ಕಳೆದುಕೊಂಡ ನಂತರ ಮೊದಲ ಬಾರಿ 209 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ.
ಎರಡನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಗುವಾಹಟಿ ಪಂದ್ಯದಲ್ಲಿ ಆಡಲಿದ್ದಾರೆಯೆ ಎಂಬ ಕುತೂಹಲ ಎಲ್ಲರಲ್ಲಿದೆ.
ಸರಣಿಯಲ್ಲಿ ಗೆಲ್ಲುವ ಉದ್ದೇಶದಿಂದ ಭಾರತವು ಆಡುವ 11ರ ಬಳಗವನ್ನು ಬಲಿಷ್ಠಗೊಳಿಸಲು ಬಯಸಿದೆ. ಬುಮ್ರಾ ಆಡುವ ಬಳಗಕ್ಕೆ ವಾಪಸಾಗುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಬದಲಿಗೆ ಬುಮ್ರಾ ಆಡಬಹುದು ,
ಟಿ-20 ಕ್ರಿಕೆಟ್ನಲ್ಲಿ ಹೆಡ್-ಟು-ಹೆಡ್ ದಾಖಲೆ
ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಿದೆ. ಉಭಯ ತಂಡಗಳು 27 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಭಾರತವು 14 ಬಾರಿ ಜಯ ಸಾಧಿಸಿದೆ. ನ್ಯೂಝಿಲ್ಯಾಂಡ್ 10 ಬಾರಿ ಗೆದ್ದಿದೆ. ಮೂರು ಪಂದ್ಯಗಳು ಟೈನಲ್ಲಿ ಕೊನೆಗೊಂಡಿವೆ







