ಮೊದಲ ಪ್ರಯತ್ನದಲ್ಲೇ ಮೂರು ಒಲಿಂಪಿಕ್ಸ್ ಕೋಟಾ: 16 ವರ್ಷಗಳಲ್ಲಿ ಅತ್ಯುತ್ತಮ ಆರಂಭ ಪಡೆದ ಭಾರತದ ಶೂಟರ್ಗಳು

Photo Credit : NDTV
ಹೊಸದಿಲ್ಲಿ: ಖತರ್ನ ದೋಹಾದಲ್ಲಿ ಇತ್ತೀಚೆಗೆ ನಡೆದ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಮೂರು ಕೋಟಾ ಸ್ಥಾನಗಳನ್ನು ಗಿಟ್ಟಿಸಿಕೊಂಡ ಭಾರತದ ಶೂಟರ್ಗಳು 16 ವರ್ಷಗಳಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಆರಂಭ ಪಡೆದಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ನಿಂದ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ತನಕ ಸತತ ಐದು ಒಲಿಂಪಿಕ್ಸ್ಗಳಲ್ಲಿ ಇದೇ ಮೊದಲ ಬಾರಿ ಭಾರತೀಯ ಶೂಟರ್ಗಳು ಮೊತ್ತ ಮೊದಲ ಅರ್ಹತಾ ಸ್ಪರ್ಧೆಯಲ್ಲೇ ಮೂರು ಒಲಿಂಪಿಕ್ಸ್ ಕೋಟಾಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಎಲ್ಲ ಮೂರು ಶೂಟಿಂಗ್ ಸ್ಪರ್ಧೆಗಳಾದ-ರೈಫಲ್, ಪಿಸ್ತೂಲ್ ಹಾಗೂ ಶಾಟ್ಗನ್ಗಳಲ್ಲಿ ಪದಕ ಗೆಲ್ಲುವ ಮೂಲಕ ಭಾರತವು ಈ ಸಾಧನೆ ಮಾಡಿದೆ. ಒಲಿಂಪಿಕ್ಸ್ನಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಭಾರತವು ಆರಂಭಿಕ ಮೇಲುಗೈ ಪಡೆದಿದೆ.
ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಜಯ್ಪಾಲ್ ಮಾಳವೀಯ ಭಾರತದ ಖಾತೆಯನ್ನು ತೆರೆದಿದ್ದರು. ಆ ಬಳಿಕ ನೀರಜ್ ಕುಮಾರ್ ಪುರುಷರ 50 ಮೀ.ರೈಫಲ್ 3 ಪೊಸಿಶನ್ಸ್ನಲ್ಲಿ ಕಂಚಿನ ಪದಕ ಜಯಿಸಿದರು. ಪುರುಷರ ಟ್ರ್ಯಾಪ್ನಲ್ಲಿ ವಿವಾನ್ ಕಪೂರ್ ಬೆಳ್ಳಿ ಪದಕ ಗೆದ್ದದ್ದಾರೆ.
ಮೂರು ಪದಕಗಳನ್ನು ಗೆದ್ದಿರುವ ಭಾರತವು 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಮೊದಲ ಕೋಟಾಗಳನ್ನು ಖಚಿತಪಡಿಸಿದ್ದಲ್ಲದೆ, ದೇಶದ ಶೂಟಿಂಗ್ ಕ್ರೀಡಾ ವಿಭಾಗದಲ್ಲಿನ ಸಾಮರ್ಥ್ಯದ ಆಳವನ್ನು ಇದು ಎತ್ತಿ ತೋರಿಸಿದೆ.
ಮೊದಲ ಪ್ರಯತ್ನದಲ್ಲಿ ಮೂರು ಒಲಿಂಪಿಕ್ಸ್ ಕೋಟಾಗಳು
ಭಾರತದ ಶೂಟರ್ಗಳು ದೋಹಾದಲ್ಲಿ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಮೂರು ಒಲಿಂಪಿಕ್ಸ್ ಕೋಟಾಗಳನ್ನು ಪಡೆದು ಹಿಂದಿನ ನಾಲ್ಕು ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಕ್ಕಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ಗಿಂತ ಮೊದಲು 2010ರ ಮ್ಯೂನಿಚ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ದೇಶವು ಎರಡು ಕೋಟಾಗಳನ್ನು ಪಡೆದುಕೊಂಡಿತ್ತು. ರಿಯೋ 2016ರ ಕ್ರೀಡಾಕೂಟಕ್ಕೂ ಮೊದಲು 2014ರ ಗ್ರಾನಡ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕೇವಲ ಒಂದು ಕೋಟಾವನ್ನು ಪಡೆದುಕೊಂಡಿತ್ತು.
2020ರ ಟೋಕಿಯೊ ಗೇಮ್ಸ್ಗಿಂತ ಮೊದಲು 2018ರ ಚಾಂಗ್ವಾನ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಈ ಸಂಖ್ಯೆ ಎರಡಕ್ಕೇರಿತು. ಆದರೆ ಭಾರತವು 2024ರ ಪ್ಯಾರಿಸ್ ಕ್ರೀಡಾಕೂಟಕ್ಕಿಂತ ಮೊದಲು 2022ರ ಒಸಿಜೆಕ್ ಶಾಟ್ಗನ್ ವಿಶ್ವ ಚಾಂಪಿಯನ್ಶಿಪ್ ಹಾಗೂ ಕೈರೊ ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಕೋಟಾ ಸ್ಥಾನ ಪಡೆದಿತ್ತು.
2026ರಲ್ಲಿ ದೋಹಾದಲ್ಲಿ ಪಡೆದಿರುವ ಮೂರು ಕೋಟಾ ಸ್ಥಾನಗಳು, 2012ರ ಆವೃತ್ತಿಯ ಲಂಡನ್ ಒಲಿಂಪಿಕ್ಸ್ ನಂತರ ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆಯ ಆರಂಭಿಕ ಹಂತದಲ್ಲಿ ಭಾರತ ನೀಡಿರುವ ಅತ್ಯುತ್ತಮ ಪ್ರದರ್ಶನವಾಗಿದೆ.
ಶೂಟರ್ಗಳ ಸಾಧನೆಯನ್ನು ಶ್ಲಾಘಿಸಿದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ಅಧ್ಯಕ್ಷ ಕಲಿಕೇಶ್ ನಾರಾಯಣ್ ಸಿಂಗ್,‘‘ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿಯೇ ಮೂರು ಕೋಟಾಗಳೊಂದಿಗೆ ಒಲಿಂಪಿಕ್ಸ್ ಸರಣಿ ಆರಂಭಿಸುವುದು ಭಾಗವಹಿಸುವ ಪ್ರತಿಯೊಬ್ಬರಿಗೂ ದೊಡ್ಡ ಉತ್ತೇಜನವಾಗಿದೆ. ರೈಫಲ್, ಪಿಸ್ತೂಲ್ ಹಾಗೂ ಶಾಟ್ಗನ್ ಎಂಬ ಮೂರು ವಿಭಾಗದಲ್ಲೂ ಭಾರತವು ಪದಕಗಳನ್ನು ಗೆದ್ದಿದೆ’’ ಎಂದಿದ್ದಾರೆ.
ಎನ್ಆರ್ಎಐ ಪ್ರಧಾನ ಕಾರ್ಯದರ್ಶಿ ಪವನಕುಮಾರ್ ಸಿಂಗ್ ಕೂಡ ಶೂಟರ್ಗಳ ಪ್ರದರ್ಶನವನ್ನು ಹೊಗಳಿದರು.
‘‘ವಿಶ್ವ ಚಾಂಪಿಯನ್ಶಿಪ್ನಲ್ಲಿ ಕೋಟಾ ಸ್ಥಾನ ಗೆಲ್ಲುವುದು ಎಂದಿಗೂ ಸುಲಭವಲ್ಲ. ಏಕೆಂದರೆ ವಿಶ್ವದ ಪ್ರತಿಯೊಬ್ಬ ಅಗ್ರ ಶೂಟರ್ಗಳು ಒಂದೇ ಸ್ಥಳದಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೈಪಾಲ್, ನೀರಜ್ ಹಾಗೂ ವಿವಾನ್ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ ತಮ್ಮ ಹಿಡಿತ ಕಾಯ್ದುಕೊಂಡಿದ್ದರು. ನಮ್ಮ ಉನ್ನತ ಕಾರ್ಯಕ್ಷಮತೆಯ ತಂಡ ಹಾಗೂ ತರಬೇತುದಾರರು ತಿಂಗಳುಗಳ ಕಾಲ ಶಾಂತವಾಗಿ ಕೆಲಸ ಮಾಡಿದ್ದರು’’ ಎಂದು ಸಿಂಗ್ ಹೇಳಿದ್ದಾರೆ.
ದೋಹಾ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನ, ಏಳು ಬೆಳ್ಳಿ ಹಾಗೂ ನಾಲ್ಕು ಕಂಚು ಸಹಿತ ಒಟ್ಟು 13 ಪದಕಗಳನ್ನು ಗೆದ್ದಿದ್ದ ಭಾರತವು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು.
ಐಎಸ್ಎಸ್ಎಫ್ ಪೀಪಲ್ಸ್ ಚಾಯ್ಸ್ ಅವಾರ್ಡ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ಗಳು
ಅಂತರ್ರಾಷ್ಟ್ರೀಯ ಶೂಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತದ ಶೂಟರ್ಗಳು 2026ರಲ್ಲಿ ವರ್ಷದ ಕ್ರೀಡಾಪಟುವಿಗೆ ನೀಡುವ ‘ಪೀಪಲ್ಸ್ ಚಾಯ್ಸ್ ಅವಾರ್ಡ್’ ಪಡೆಯುವ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಭಾರತದ ನಾಲ್ವರು ಶೂಟರ್ಗಳಾದ-ಇಶಾ ಸಿಂಗ್, ಇಳವೆನಿಲ್ ವಲರಿವಾನ್, ತಿಲೋತ್ತಮ ಸೇನ್ ಹಾಗೂ ಸಾಕ್ಷಿ ಪಾಡೆಕರ್ ಮಹಿಳೆಯರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ತುಷಾರ್ ಮಾನೆ ಅವರಿದ್ದಾರೆ.
ಪ್ರಶಸ್ತಿ ಆಯ್ಕೆಗಾಗಿ ವೋಟಿಂಗ್ ಪ್ರಕ್ರಿಯೆ ನ.9ರಿಂದ ಆರಂಭವಾಗಿದ್ದು, ನ.18ರಂದು ಕೊನೆಗೊಳ್ಳಲಿದೆ. ಪುರುಷರ ಹಾಗೂ ಮಹಿಳೆಯರ ವಿಭಾಗದ ವಿಜೇತರನ್ನು ನಂತರ ಪ್ರಕಟಿಸಲಾಗುತ್ತದೆ.






