ದಿಲ್ಲಿಯಲ್ಲಿ ಕಾರು ಸ್ಫೋಟ | ಕೋಲ್ಕತಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯಕ್ಕೆ ಬಿಗಿ ಬಂದೋಬಸ್ತ್

Photo: thehansindia.com
ಕೋಲ್ಕತಾ, ನ.11: ದಿಲ್ಲಿಯ ಕೆಂಪುಕೋಟೆ ಸಮೀಪ ಸೋಮವಾರ ಕಾರು ಸ್ಫೋಟಗೊಂಡು ಕನಿಷ್ಠ 9 ಮಂದಿ ಮೃತಪಟ್ಟು, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಈಡನ್ ಗಾರ್ಡನ್ಸ್ ಹಾಗೂ ಕೋಲ್ಕತಾದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗರಿಷ್ಠ ಕಟ್ಟೆಚ್ಚರವಹಿಸಲಾಗಿದೆ ಎಂದು ದೃಢಪಡಿಸಿರುವ ಕೋಲ್ಕತಾ ಪೊಲೀಸ್ ಆಯುಕ್ತ ಮನೋಜ್ ವರ್ಮಾ, ಶುಕ್ರವಾರದಿಂದ ಮೊದಲ ಟೆಸ್ಟ್ ಪಂದ್ಯದ ಆತಿಥ್ಯವಹಿಸಿರುವ ಈಡನ್ ಗಾರ್ಡನ್ಸ್ ಸ್ಟೇಡಿಯಂ ಸಹಿತ ನಗರದ ಪ್ರಮುಖ ಸ್ಥಳಗಳಲ್ಲಿ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
‘‘ನಾವು ಅತ್ಯಂತ ಹೆಚ್ಚು ಅಲರ್ಟ್ ಆಗಿದ್ದೇವೆ. ದಿಲ್ಲಿಯಲ್ಲಿ ನಡೆದಿರುವ ಸ್ಫೋಟವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಹಾಗೂ ಹೆಚ್ಚುವರಿ ಭದ್ರತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ವಿಶೇಷ ಭದ್ರತಾ ಪಡೆ(ಎಸ್ಟಿಎಫ್)ಯನ್ನು ನಿಯೋಜಸಲಾಗಿದೆ’’ ಎಂದು ಕೋಲ್ಕತಾ ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶಿಷ್ಟಾಚಾರಗಳು ಹಾಗೂ ಜನದಟ್ಟಣೆಯನ್ನು ನಿರ್ವಹಿಸುವ ಯೋಜನೆಯನ್ನು ಅಂತಿಮಗೊಳಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನಡುವೆ ಮಂಗಳವಾರ ಸಭೆ ನಡೆಸಲಾಗಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ವಾಸ್ತವ್ಯವಿರುವ ಹೊಟೇಲ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.







