ಐರ್ಲ್ಯಾಂಡ್ ವಿರುದ್ಧ ರೋಚಕ ಜಯ : 2027ರ ಏಕದಿನ ವಿಶ್ವಕಪ್ಗೆ ಅಫ್ಘಾನಿಸ್ತಾನ ಅರ್ಹತೆ

Photo Credit : PTI
ಹೊಸದಿಲ್ಲಿ, ಆ.11: ಬೆಲ್ಫಾಸ್ಟ್ನಲ್ಲಿ ಸೋಮವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ಗಳ ಅಂತರದಿಂದ ಐರ್ಲ್ಯಾಂಡ್ ತಂಡವನ್ನು ಮಣಿಸಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು 2027ರ ಆವೃತ್ತಿಯ ಏಕದಿನ ವಿಶ್ವಕಪ್ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ.
ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಐರ್ಲ್ಯಾಂಡ್ ತಂಡವನ್ನು 46.3 ಓವರ್ಗಳಲ್ಲಿ 206 ರನ್ಗೆ ಆಲೌಟ್ ಮಾಡಿರುವ ಅಫ್ಘಾನಿಸ್ತಾನ ತಂಡವು 44.5 ಓವರ್ಗಳಲ್ಲಿ ಗುರಿ ತಲುಪಿತು. ರಶೀದ್ ಖಾನ್ ಅತ್ಯುತ್ತಮ ಬೌಲಿಂಗ್ನಿಂದಾಗಿ ಗೆಲುವು ಒಲಿಯಿತು.
2027ರ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲು ಅಫ್ಘಾನಿಸ್ತಾನ ತಂಡಕ್ಕೆ ಮೂರನೇ ಏಕದಿನ ಪಂದ್ಯ ಗೆಲ್ಲುವ ಅಗತ್ಯವಿತ್ತು. ಅಫ್ಘಾನಿಸ್ತಾನ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಈಗಾಗಲೇ ಐರ್ಲ್ಯಾಂಡ್ ತಂಡವನ್ನು 92 ರನ್ಗಳಿಂದ ಮಣಿಸಿದ್ದು, ಮೊದಲ ಪಂದ್ಯವು ಮಳೆಗಾಹುತಿಯಾಗಿತ್ತು.
ಅಫ್ಘಾನಿಸ್ತಾನ ತಂಡಕ್ಕೆ ರಶೀದ್, ಅಹ್ಮದ್ಝೈ ಆಸರೆ: ರನ್ ಚೇಸ್ ವೇಳೆ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಅಫ್ಘಾನಿಸ್ತಾನ ತಂಡವು 79 ರನ್ಗಳಿಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ತಂಡವು 176 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಾಗ ಕ್ರೀಸಿಗಿಳಿದ ರಶೀದ್ ಖಾನ್ 43 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಿತ ಔಟಾಗದೆ 37 ರನ್ ಗಳಿಸಿದರು. ಯಮಿನ್ ಅಹ್ಮದ್ಝೈ 26 ಎಸೆತಗಳಲ್ಲಿ ಔಟಾಗದೆ 4 ರನ್ ಗಳಿಸಿದರು.
ತನ್ನ ತಂಡದ ಗೆಲುವಿಗೆ ನಿರ್ಣಾಯಕ ಕೊಡುಗೆ ನೀಡಿದ ರಶೀದ್ ಖಾನ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿದ ಅಫ್ಘಾನಿಸ್ತಾನ: ಏಕದಿನ ಟೀಮ್ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆದಿದೆ.
ಅಫ್ಘಾನಿಸ್ತಾನ ತಂಡವು ಇದೀಗ ನಾಲ್ಕನೇ ಬಾರಿ ಏಕದಿನ ವಿಶ್ವಕಪ್ನಲ್ಲಿ ಆಡುವ ಅವಕಾಶ ಪಡೆದಿದೆ.
ಬೌಲರ್ಗಳ ಪ್ರಯತ್ನವನ್ನು ಶ್ಲಾಘಿಸಿದ ರಹಮತ್ ಶಾ: ತನ್ನ ಯೋಜನೆಗಳಿಗೆ ಬದ್ಧವಾಗಿ, ವಾತಾವರಣಕ್ಕೆ ಕ್ಷಿಪ್ರವಾಗಿ ಹೊಂದಿಕೊಂಡಿರುವ ತನ್ನ ಬೌಲರ್ಗಳನ್ನು ರಹಮತ್ ಶಾ ಶ್ಲಾಘಿಸಿದರು.
ನಿಮಗೆಲ್ಲರಿಗೂ ಧನ್ಯವಾದಗಳು. ಇದೊಂದು ಕನಿಷ್ಠ ಮೊತ್ತದ ಪಂದ್ಯವಾಗಿತ್ತು. ಯಾವಾಗಲೂ ಕಠಿಣವಾಗಿರುವ ಈ ಪಂದ್ಯವನ್ನು ನಾವು ಗೆದ್ದುಕೊಂಡಿದ್ದೇವೆ’’ ಎಂದು ರಹಮತ್ ಹೇಳಿದ್ದಾರೆ.
‘‘9ನೇ ವಿಕೆಟ್ ಜೊತೆಯಾಟವು ಐರ್ಲ್ಯಾಂಡ್ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾಯಿತು’’ ಎಂದು ಬೆಟ್ಟು ಮಾಡಿರುವ ರಹಮತ್, ‘‘ಮುಂದಿನ ದಿನಗಳಲ್ಲಿ ಇಂತಹ ಜೊತೆಯಾಟವನ್ನು ಅಫ್ಘಾನಿಸ್ತಾನವು ಆರಂಭದಲ್ಲೇ ಮುರಿಯಲು ಎದುರು ನೋಡುತ್ತಿದೆ’’ ಎಂದು ಹೇಳಿದ್ದಾರೆ.






