ಐರ್ಲೆಂಡ್ ವಿರುದ್ಧ ಅನಪೇಕ್ಷಿತ ದಾಖಲೆ ನಿರ್ಮಿಸಿದ ತಿಲಕ್ ವರ್ಮಾ !

Photo credit : X@BCCI
ಬೆಲ್ಫಾಸ್ಟ್ : ಐರ್ಲೆಂಡ್ ವಿರುದ್ಧ ಒಂದು ರನ್ ಅಂತರದ ನಾಟಕೀಯ ಸೋಲು ಕಂಡ ಪಂದ್ಯದಲ್ಲಿ ಭಾರತದ ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ದಾಖಲಿಸಿದರೂ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅನಪೇಕ್ಷಿತ ದಾಖಲೆಯೊಂದನ್ನು ಅವರು ಭಾನುವಾರ ಸೃಷ್ಟಿಸಿದರು. ಐರ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ನಿಧಾನ ಅರ್ಧಶತಕ ದಾಖಲಿಸಿದ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡರು.
ಸ್ಟೋರ್ಮಂಟ್ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಅಗ್ರಕ್ರಮಾಂಕ ದಯನೀಯವಾಗಿ ಕುಸಿದ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ತಿಲಕ್ ವರ್ಮಾ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟಿ20 ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳಿಸಿದ ಆರನೇ ಅತಿನಿಧಾನ ಅರ್ಧಶತಕವಾಗಿದೆ.
ಕೆ.ಎಲ್.ರಾಹುಲ್ 2022ರಲ್ಲಿ ತಿರುವನಂತಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 56 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದು, ಭಾರತೀಯರೊಬ್ಬರ ಅತ್ಯಂತ ನಿಧಾನದ ಅರ್ಧಶತಕ ಎನಿಸಿಕೊಂಡಿದೆ. ಗೌತಮ್ ಗಂಭೀರ್ (ಆಸ್ಟ್ರೇಲಿಯಾ ವಿರುದ್ಧ 54 ಎಸೆತ), ಸೂರ್ಯಕುಮಾರ್ ಯಾದವ್ (ಅಮೆರಿಕ ವಿರುದ್ಧ 49 ಎಸೆತ), ವಿರಾಟ್ ಕೊಹ್ಲಿ (ದಕ್ಷಿಣ ಆಫ್ರಿಕಾ ವಿರುದ್ಧ 48 ಎಸೆತ, ಪಾಕಿಸ್ತಾನ ವಿರುದ್ಧ 45 ಎಸೆತ) ನಂತರದ ಸ್ಥಾನಗಳಲ್ಲಿದ್ದಾರೆ. ಇದೀಗ ತಿಲಕ್ ವರ್ಮಾ 45 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ಜಂಟಿ ಆರನೇ ಸ್ಥಾನದಲ್ಲಿದ್ದಾರೆ.
ರಾಜಸ್ಥಾನದ ಟೋಂಕ್ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಬಳಿಕ ಕ್ರಿಕೆಟರ್ ಆಗಿ ಬೆಳೆದ ಜೈ ಮೂಂಡ್ರಾ ಅವರು ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ಕೂಡಾ ಔಟ್ ಆಗಿ ತಂಡ ತೀರಾ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ವರ್ಮಾ ಭಾರತದ ಇನಿಂಗ್ಸ್ ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು.
ಇಶಾನ್ ಕಿಶನ್ ರನೌಟ್ ಆಗುವ ಮೂಲಕ ಪವರ್ ಪ್ಲೇ ಮುಕ್ತಾಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 35 ರನ್ಗಳಿಗೆ ಕುಂಟುತ್ತಿತ್ತು. ಆಗ ಭಾರತದ ಇನಿಂಗ್ಸ್ ಕಟ್ಟುವ ನಿಟ್ಟಿನಲ್ಲಿ ವರ್ಮಾ ಏಕಾಂಗಿ ಹೋರಾಟ ನಡೆಸಿದರು. ಮ್ಯಾಥ್ಯೂ ಹೊಲಾರ್ಡ್ ಅವರ ಓವರ್ ನಲ್ಲಿ ಡೀಪ್ ಮಿಡ್ವಿಕಟ್ನಲ್ಲಿ ಭಾರತೀಯ ಇನಿಂಗ್ಸ್ ನ ಮೊದಲ ಸಿಕ್ಸರ್ ಬಾರಿಸುವ ಮೂಲಕ ವರ್ಮಾ ಅರ್ಧಶತಕ ಪೂರೈಸಿದರು. ಮತ್ತೊಂದು ಅಂಥ ಹೊಡೆತಕ್ಕೆ ಕೈಹಾಕಿದ ವರ್ಮಾ ಕ್ಯಾಚ್ ನೀಡಿ ನಿರ್ಗಮಿಸುವ ಮೂಲಕ ಭಾರತ ತಂಡ ಆಘಾತ ಅನುಭವಿಸಿತು.






