ಕೌಂಟಿ ಚಾಂಪಿಯನ್ಶಿಪ್: ಶತಕ ಸಿಡಿಸಿದ ತಿಲಕ್ ವರ್ಮಾ

Photo : indiatoday
ಲಂಡನ್: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಹ್ಯಾಂಪ್ಶೈರ್ ಪರ ಆಡಿರುವ ತನ್ನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
22ರ ಹರೆಯದ ತಿಲಕ್ ವರ್ಮಾ ಅವರು ಮೊದಲ ದಿನದಾಟದಲ್ಲಿ ಎಸ್ಸೆಕ್ಸ್ ವಿರುದ್ಧ ಔಟಾಗದೆ 98 ರನ್ ಗಳಿಸಿದ್ದು, ಎರಡನೇ ದಿನದಾಟದಲ್ಲಿ ತನ್ನ 6ನೇ ಪ್ರಥಮ ದರ್ಜೆ ಶತಕವನ್ನು ಪೂರೈಸಿದರು.
ಆದರೆ ತಿಲಕ್ ವರ್ಮಾ ಅವರು ಶತಕ ಪೂರೈಸಿದ ಬೆನ್ನಿಗೇ ವಿಕೆಟ್ ಒಪ್ಪಿಸಿದರು. ಸೈಮನ್ ಹ್ಯಾಮರ್ ಬೌಲಿಂಗ್ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ಗೆ ಕ್ಯಾಚ್ ಪಡೆದರು.
241 ಎಸೆತಗಳಲ್ಲಿ ಶತಕ ಗಳಿಸಿದ ತಿಲಕ್ ವರ್ಮಾ ಅವರು ಎಸ್ಸೆಕ್ಸ್ನ ಮೊದಲ ಇನಿಂಗ್ಸ್ ಮೊತ್ತ 296ಕ್ಕೆ ಉತ್ತರವಾಗಿ ಹ್ಯಾಂಪ್ಶೈರ್ ದಿಟ್ಟ ಉತ್ತರ ನೀಡಲು ನೆರವಾದರು.
ತಿಲಕ್ ಭಾರತದ ಪರ 4 ಏಕದಿನ ಹಾಗೂ 25 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಅವರು ಕೇವಲ 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಹ್ಯಾಂಪ್ಶೈರ್ ಪರ 4 ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳಲ್ಲಿ ತಿಲಕ್ ಆಡಲಿದ್ದಾರೆ.
‘‘ಟೆಸ್ಟ್ ಕ್ರಿಕೆಟ್ ನನ್ನ ಮೆಚ್ಚಿನ ಮಾದರಿಯಾಗಿದ್ದು, ಈ ಅವಕಾಶಕ್ಕಾಗಿ ಕಾಯುತ್ತಿದ್ದೆ. ನಾನು ಟಿ-20 ಕ್ರಿಕೆಟ್ನಲ್ಲಿ 3ನೆ ರ್ಯಾಂಕಿನಲ್ಲಿದ್ದಾಗ ಎಲ್ಲರೂ ನಾನು ಟಿ-20 ಕ್ರಿಕೆಟ್ ಸ್ಪೆಷಲಿಸ್ಟ್ ಎಂದು ಭಾವಿಸಿದ್ದರು. ನಾನು ಉತ್ತಮ ಟೆಸ್ಟ್ ಬ್ಯಾಟರ್ ಆಗಿದ್ದು, ಸವಾಲಿನ ಪರಿಸ್ಥಿತಿಯನ್ನು ಆನಂದಿಸುತ್ತೇನೆ’’ ಎಂದು ಹ್ಯಾಂಪ್ಶೈರ್ ಕ್ರಿಕೆಟ್ನ ಯೂಟ್ಯೂಬ್ ಚಾನೆಲ್ಗೆ ತಿಳಿಸಿದ್ದಾರೆ.







