Duleep Trophy | ತಿಲಕ್ ವರ್ಮಾ ಅರ್ಧಶತಕ; ದಕ್ಷಿಣ ವಲಯ ಫೈನಲ್ ಗೆ, ಪೂರ್ವ ವಲಯ ಎದುರಾಳಿ

ತಿಲಕ್ ವರ್ಮಾ | Photo Credit : PTI
ಬೆಂಗಳೂರು, ಸೆ. 2: ನಾಯಕ ತಿಲಕ್ ವರ್ಮಾ ಅವರ ತಾಳ್ಮೆಯ ಅರ್ಧಶತಕದ ಸಹಾಯದಿಂದ ಉತ್ತರ ವಲಯ ವಿರುದ್ಧ ಏಳು ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದ ದಕ್ಷಿಣ ವಲಯ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದೆ.
BCCIನ ಎಕ್ಸಲೆನ್ಸ್ ಕೇಂದ್ರದ ಮೈದಾನದಲ್ಲಿ ನಾಲ್ಕನೇ ದಿನದಾಟವಾದ ಬುಧವಾರ ಎರಡನೇ ಸೆಮಿಫೈನಲ್ ಪಂದ್ಯ ಗೆಲ್ಲಲು 181 ರನ್ ಗುರಿ ಪಡೆದ ದಕ್ಷಿಣ ವಲಯ ತಂಡವು 3 ವಿಕೆಟ್ ಗಳ ನಷ್ಟಕ್ಕೆ 182 ರನ್ ಗಳಿಸಿದೆ. ತಿಲಕ್ 79 ಎಸೆತಗಳಲ್ಲಿ ಔಟಾಗದೆ 51 ರನ್ ಗಳಿಸಿದರು. ತಿಲಕ್ರೊಂದಿಗೆ ನಾಲ್ಕನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 79 ರನ್ ಸೇರಿಸಿದ ಆರ್. ಸ್ಮರಣ್ (ಔಟಾಗದೆ 32, 42 ಎಸೆತ) ದಕ್ಷಿಣ ವಲಯದ ಗೆಲುವಿನ ಹಾದಿ ಸುಗಮಗೊಳಿಸಿದರು.
►ನಿಧೀಶ್ ಗೆ ಐದು ವಿಕೆಟ್, ಉತ್ತರ ವಲಯ 297 ರನ್ ಗೆ ಆಲೌಟ್
ಇದಕ್ಕೂ ಮೊದಲು ಉತ್ತರ ವಲಯ ತಂಡವು 7 ವಿಕೆಟ್ ಗಳ ನಷ್ಟಕ್ಕೆ 256 ರನ್ ನಿಂದ 139 ರನ್ ಮುನ್ನಡೆಯೊಂದಿಗೆ ತನ್ನ ಎರಡನೇ ಇನಿಂಗ್ಸ್ ಆರಂಭಿಸಿತು. ಆದರೆ ನಿನ್ನೆಯ ಸ್ಕೋರ್ ಗೆ ಕೇವಲ 41 ರನ್ ಸೇರಿಸಿ 297 ರನ್ ಗೆ ಸರ್ವಪತನ ಕಂಡಿತು.
ಅನ್ಶುಲ್ ಕಾಂಬೋಜ್ ಹಾಗೂ ನಿಶಾಂತ್ ಸಿಂಧು ಎಂಟನೇ ವಿಕೆಟ್ ಗೆ 60 ರನ್ ಜೊತೆಯಾಟ ನಡೆಸಿದ್ದು, ಕಾಂಬೋಜ್ (36 ರನ್, 29 ಎಸೆತ) ಅವರ ವಿಕೆಟ್ ಉರುಳಿಸಿದ ನಿಧೀಶ್ ಈ ಜೋಡಿಯನ್ನು ಬೇರ್ಪಡಿಸಿದರು.
ಗುರ್ನೂರ್ ಬ್ರಾರ್ (7 ರನ್) ಹಾಗೂ ಅರ್ಷದೀಪ್ ಸಿಂಗ್ (12 ರನ್) ತಲಾ ಒಂದು ಸಿಕ್ಸರ್ ಸಿಡಿಸಿದರು. ನಿಧೀಶ್ ಈ ಇಬ್ಬರು ಆಟಗಾರರ ವಿಕೆಟ್ ಪಡೆದು 56 ರನ್ ಗೆ ಐದು ವಿಕೆಟ್ ಗೊಂಚಲು ಪೂರೈಸಿದರು. ನಿಶಾಂತ್ ಸಿಂಧು ಔಟಾಗದೆ 35 ರನ್ ಗಳಿಸಿದರು.
►ಸುಲಭ ಗುರಿ ಬೆನ್ನಟ್ಟಿದ ತಿಲಕ್ ಹಾಗೂ ಸ್ಮರಣ್
ರಿಕಿ ಭುಯಿ ಹಾಗೂ ನಾರಾಯಣ ಜಗದೀಶನ್ ಆರಂಭಿಕ ವಿಕೆಟ್ ಗೆ 64 ರನ್ ಸೇರಿಸುವ ಮೂಲಕ ದಕ್ಷಿಣ ವಲಯಕ್ಕೆ ಉತ್ತಮ ಆರಂಭ ಒದಗಿಸಿದರು. ರಿಕಿ 53 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಿತ 42 ರನ್ ಗಳಿಸಿ ಬ್ರಾರ್ ಗೆ ವಿಕೆಟ್ ಒಪ್ಪಿಸಿದರು.
ಶೇಕ್ ರಶೀದ್ (1 ರನ್) ಅಬಿದ್ ಮುಷ್ತಾಕ್ಗೆ ಕ್ಲೀನ್ಬೌಲ್ಡಾದರು. ಆದರೆ ಜಗದೀಶನ್ ಹಾಗೂ ತಿಲಕ್ ಭೋಜನ ವಿರಾಮದ ತನಕ ಇನ್ನಷ್ಟು ಹಾನಿಯಾಗದಂತೆ ತಡೆದರು.
ಜಗದೀಶನ್–ತಿಲಕ್ ಜೋಡಿ ದಕ್ಷಿಣ ವಲಯದ ಸ್ಕೋರನ್ನು 100ರ ಗಡಿ ದಾಟಿಸಿದರು. ಜಗದೀಶನ್ 83 ಎಸೆತಗಳಲ್ಲಿ 43 ರನ್ ಗಳಿಸಿ ಮುಷ್ತಾಕ್ಗೆ ವಿಕೆಟ್ ಒಪ್ಪಿಸಿದರು. ಆಗ ತಿಲಕ್ರೊಂದಿಗೆ ಕೈಜೋಡಿಸಿದ ಸ್ಮರಣ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ತಿಲಕ್ ವರ್ಮಾ ಬೌಂಡರಿ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.
ದಕ್ಷಿಣ ವಲಯದ ನಾಯಕ ತಿಲಕ್ ತಮ್ಮ ತಂಡ ಮೊದಲ ಇನಿಂಗ್ಸ್ ನಲ್ಲಿ 80 ರನ್ ಗೆ ಐದು ವಿಕೆಟ್ ಗಳನ್ನು ಕಳೆದುಕೊಂಡಿದ್ದಾಗ ಔಟಾಗದೆ 116 ರನ್ ಗಳಿಸಿ ಇನಿಂಗ್ಸ್ಗೆ ಆಸರೆಯಾದರು. ಶ್ರೇಯಸ್ ಗೋಪಾಲ್ (87 ರನ್) ಅವರೊಂದಿಗೆ 175 ರನ್ ಜೊತೆಯಾಟದಲ್ಲಿ ಭಾಗಿಯಾದ ತಿಲಕ್ ದಕ್ಷಿಣ ವಲಯವು ಮೊದಲ ಇನಿಂಗ್ಸ್ನಲ್ಲಿ 117 ರನ್ ಮುನ್ನಡೆ ಪಡೆಯುವಲ್ಲಿ ನೆರವಾದರು.
ಸನತ್ ಸಾಂಗ್ವಾನ್ ಹಾಗೂ ಆಯುಷ್ ದೊಸೆಜಾ ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಉತ್ತರ ವಲಯವು ಎರಡನೇ ಇನಿಂಗ್ಸ್ನಲ್ಲಿ ಒಂದಷ್ಟು ಹೋರಾಟ ನೀಡಿತು. ಆದರೆ ಮೂರನೇ ದಿನದಾಟದಲ್ಲಿ ಕುಸಿತ ಕಂಡ ಕಾರಣ ದಕ್ಷಿಣ ವಲಯದ ಗೆಲುವಿಗೆ ಕಠಿಣ ಗುರಿ ನೀಡಲು ಸಾಧ್ಯವಾಗಲಿಲ್ಲ.
ದಕ್ಷಿಣ ವಲಯ ತಂಡವು ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಸೆ. 6ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ ನಲ್ಲಿ ಪೂರ್ವ ವಲಯ ತಂಡವು ಕೇಂದ್ರ ವಲಯ ತಂಡವನ್ನು ನಾಲ್ಕು ವಿಕೆಟ್ ಗಳಿಂದ ಮಣಿಸಿತ್ತು.






