ಭಾರತ ‘ಎ’ ಏಕದಿನ ತಂಡ ಪ್ರಕಟ: ತಿಲಕ್ ವರ್ಮಾ ನಾಯಕ, ವೈಭವ್ ಸೂರ್ಯವಂಶಿಗೆ ಸ್ಥಾನ

ವೈಭವ್ ಸೂರ್ಯವಂಶಿ | Photo Credit ; PTI
ಮುಂಬೈ, ಮೇ 14: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ತ್ರಿಕೋನ ಸರಣಿಗಾಗಿ 15 ಸದಸ್ಯರ ಭಾರತ ‘ಎ’ ತಂಡವನ್ನು ಘೋಷಿಸಿದೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ತಿಲಕ್ ವರ್ಮಾರನ್ನು ತಂಡದ ನಾಯಕನಾಗಿ ನೇಮಿಸಲಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ತಂಡದ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಅಂಡರ್-19 ವಿಶ್ವಕಪ್ ಗೆದ್ದಿರುವ ಭಾರತ ತಂಡದ ಭಾಗವಾಗಿದ್ದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಈ ತಂಡದಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
ಜೂನ್ 9ರಂದು ಶ್ರೀಲಂಕಾದ ದಾಂಬುಲಾದಲ್ಲಿ ಆರಂಭಗೊಳ್ಳಲಿರುವ ತ್ರಿಕೋನ ಸರಣಿಯಲ್ಲಿ ಭಾರತವಲ್ಲದೆ, ಆತಿಥೇಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ‘ಎ’ ತಂಡಗಳು ಭಾಗವಹಿಸಲಿವೆ. ಜೂನ್ 21ರಂದು ಫೈನಲ್ ನಡೆಯಲಿದೆ.
ಈ ಸೀಮಿತ ಓವರ್ಗಳ ಸರಣಿಯ ನಂತರ, ಭಾರತ ’ಎ’ ತಂಡವು ಶ್ರೀಲಂಕಾ ’ಎ’ ವಿರುದ್ಧ ಎರಡು ಬಹುದಿನಗಳ ಪಂದ್ಯಗಳನ್ನು ಆಡಲಿದ್ದು, ಆ ಸರಣಿಯ ತಂಡವನ್ನು ನಂತರ ಘೋಷಿಸಲಾಗುವುದು.
ಏಕದಿನ ತ್ರಿಕೋನ ಸರಣಿಗೆ ಭಾರತ ’ಎ’ ತಂಡ:
ತಿಲಕ್ ವರ್ಮಾ (ನಾಯಕ), ಪ್ರಿಯಾನ್ಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಹರ್ಷ್ ದುಬೆ, ಸೂರ್ಯಾಂಶ್ ಶೇಡ್ಗೆ, ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುದ್ಧವೀರ್ ಸಿಂಗ್, ಅನ್ಶುಲ್ ಕಾಂಬೋಜ್, ಅರ್ಷದ್ ಖಾನ್.






