IPL | ಕೆಕೆಆರ್ ಬೌಲಿಂಗ್ ಕೋಚ್ ಆಗಿ ಟಿಮ್ ಸೌಥಿ

ಟಿಮ್ ಸೌಥಿ |Photo Credit : KolkataKnightRiders
ಕೋಲ್ಕತಾ, ನ.14: ನ್ಯೂಝಿಲ್ಯಾಂಡ್ ನ ಮಾಜಿ ವೇಗದ ಬೌಲರ್ ಟಿಮ್ ಸೌಥಿ ಅವರನ್ನು 2026ರ ಆವೃತ್ತಿಯ ಐಪಿಎಲ್ ಟೂರ್ನಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಶುಕ್ರವಾರ ಪ್ರಕಟಿಸಿದೆ.
‘ಸೌಥಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿನ ವಿಶಾಲ ಅನುಭವ, ಈ ಹಿಂದೆ ಫ್ರಾಂಚೈಸಿಯೊಂದಿಗಿನ ನಂಟು ಕೆಕೆಆರ್ ಕೋಚಿಂಗ್ ಸ್ಟಾಫ್ ಗೆ ಅಮೂಲ್ಯ ಸೇರ್ಪಡೆಯಾಗಿಸಿದೆ’ ಎಂದು ಫ್ರಾಂಚೈಸಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ತಲೆಮಾರಿನ ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿರುವ ಸೌಥಿ 15 ವರ್ಷಗಳ ಕಾಲ ನ್ಯೂಝಿಲ್ಯಾಂಡ್ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿದ್ದರು. ತನ್ನ ದೇಶವನ್ನು 107 ಟೆಸ್ಟ್ ಪಂದ್ಯಗಳು, 161 ಏಕದಿನ ಹಾಗೂ 126 ಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಸೌಥಿ 776 ಅಂತರರಾಷ್ಟ್ರೀಯ ವಿಕೆಟ್ ಗಳನ್ನು ಪಡೆದಿದ್ದಾರೆ.
ತನ್ನ ಸ್ವಿಂಗ್, ನಿಖರತೆ ಹಾಗೂ ನಾಯಕತ್ವದಿಂದ ಖ್ಯಾತಿ ಪಡೆದಿರುವ ಸೌಥಿ ನ್ಯೂಝಿಲ್ಯಾಂಡ್ ನ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. 2019ರ ಐಸಿಸಿ ವಿಶ್ವಕಪ್ ಅಭಿಯಾನ ಹಾಗೂ 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸೌಥಿ ಅವರು ಕೆಕೆಆರ್ ಕುಟುಂಬಕ್ಕೆ ಹೊಸಬರಲ್ಲ. ತನ್ನ ಐಪಿಎಲ್ ವೃತ್ತಿಜೀವನದಲ್ಲಿ 2021, 2022,2023ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು. 2025ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪ್ರಕಟಿಸಿದ್ದರು.
‘‘ಕೆಕೆಆರ್ ನನಗೆ ಯಾವಾಗಲೂ ಮನೆಯಂತೆ ಭಾಸವಾಗುತ್ತಿತ್ತು. ಹೊಸ ಹುದ್ದೆಯೊಂದಿಗೆ ಆ ತಂಡಕ್ಕೆ ವಾಪಸಾಗುತ್ತಿರುವುದು ನನಗೆ ಲಭಿಸಿರುವ ಗೌರವ. ಫ್ರಾಂಚೈಸಿಯು ಉತ್ತಮ ಸಂಸ್ಕೃತಿ, ಉತ್ಸಾಹಿ ಅಭಿಮಾನಿಗಳು ಹಾಗೂ ಉತ್ತಮ ಆಟಗಾರರನ್ನು ಹೊಂದಿದೆ. ಬೌಲರ್ ಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ. ಈ ಮೂಲಕ 2026ರ ಐಪಿಎಲ್ ನಲ್ಲಿ ತಂಡದ ಯಶಸ್ಸಿಗೆ ನೆರವಾಗುವೆ’’ಎಂದು ಸೌಥಿ ಹೇಳಿದ್ದಾರೆ.







