ಎರಡನೇ ಏಕದಿನ: ಆಸ್ಟ್ರೇಲಿಯಕ್ಕೆ ಸೋಲುಣಿಸಿದ ಇಂಗ್ಲೆಂಡ್

ಟಾಮ್ ಬಾಂಟನ್ | Photo Credit :PTI
ಅಡಿಲೇಡ್: ಟಾಮ್ ಬಾಂಟನ್ ಭರ್ಜರಿ ಬ್ಯಾಟಿಂಗ್(121 ರನ್, 99 ಎಸೆತ, 12 ಬೌಂಡರಿ, 4 ಸಿಕ್ಸರ್)ಹಾಗೂ ಅಟ್ಕಿನ್ಸನ್(4-28)ಜೀವನಶ್ರೇಷ್ಠ ಬೌಲಿಂಗ್ ಬಲದಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡವನ್ನು 135 ರನ್ಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ಬುಧವಾರ ಹೊಬರ್ಟ್ನಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಪಂದ್ಯವು ಸರಣಿ ನಿರ್ಣಾಯಕವಾಗಲಿದೆೆ.
ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು ಆರು ವಿಕೆಟ್ಗಳ ನಷ್ಟಕ್ಕೆ 355 ರನ್ ಗಳಿಸಿದೆ. ಆಸ್ಟ್ರೇಲಿಯದಲ್ಲಿ ತನ್ನ ಗರಿಷ್ಠ ಏಕದಿನ ಸ್ಕೋರ್ ಗಳಿಸಿತು. ಆಸ್ಟ್ರೇಲಿಯ ತಂಡವು ತಾಯ್ನಾಡಿನಲ್ಲಿ ಮೊದಲ ಬಾರಿ 350 ರನ್ ಬಿಟ್ಟುಕೊಟ್ಟಿದೆ.
ಗೆಲ್ಲಲು ಸವಾಲಿನ ಮೊತ್ತ ಪಡೆದ ಆಸ್ಟ್ರೇಲಿಯ ತಂಡವು 44.3 ಓವರ್ಗಳಲ್ಲಿ 220 ರನ್ ಗಳಿಸಿ ಆಲೌಟಾಯಿತು. ಕ್ಯಾಮರೂನ್ ಗ್ರೀನ್(64 ರನ್, 82 ಎಸೆತ, 2 ಸಿಕ್ಸರ್)ಹಾಗೂ ಮ್ಯಾಟ್ ರೆನ್ಶಾ(63 ರನ್, 74 ಎಸೆತ, 6 ಬೌಂಡರಿ)ಅರ್ಧಶತಕ ಗಳಿಸಿ ಗೆಲುವಿನ ವಿಶ್ವಾಸ ಮೂಡಿಸಿದರು. ಅಟ್ಕಿನ್ಸನ್, ಕರ್ರನ್(2-38) ಹಾಗೂ ಡಾಸನ್(2-41)ಆಸ್ಟ್ರೇಲಿಯವನ್ನು ಬೇಗನೆ ನಿಯಂತ್ರಿಸಿದರು.
ಶತಕವೀರ ಬಾಂಟನ್ ಹಾಗೂ ಜೋ ರೂಟ್(62 ರನ್)ಎರಡನೇ ವಿಕೆಟ್ಗೆ 137 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಜೋರ್ಡನ್ ಕಾಕ್ಸ್(67 ರನ್, 49 ಎಸೆತ)ಹಾಗೂ ವಿಲ್ ಜಾಕ್ಸ್(ಔಟಾಗದೆ 54 ರನ್, 40 ಎಸೆತ)ಅರ್ಧಶತಕ ಗಳಿಸಿದ್ದಲ್ಲದೆ, ಐದನೇ ವಿಕೆಟ್ಗೆ 70 ಎಸೆತಗಳಲ್ಲಿ 102 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಜೇಕಬ್ ಬೆಥೆಲ್ ಹಾಗೂ ಜೋಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ಕಾಕ್ಸ್ 49 ಎಸೆತಗಳಲ್ಲಿ ತನ್ನ ಎರಡನೇ ಅರ್ಧಶತಕ(67)ಸಿಡಿಸಿದರು.
ಗೆಲ್ಲಲು ಕಠಿಣ ಗುರಿ ಪಡೆದ ಆಸ್ಟ್ರೇಲಿಯ ತಂಡವು 7ನೇ ಓವರ್ನಲ್ಲಿ 29 ರನ್ಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಟ್ರಾವಿಸ್ ಹೆಡ್(7 ರನ್), ನಾಯಕ ಮಿಚೆಲ್ ಮಾರ್ಷ್(2 ರನ್), ಕೂಪರ್ ಕಾನೊಲಿ(0) ಹಾಗೂ ಜೋಶ್ ಇಂಗ್ಲಿಸ್(3 ರನ್) ಅಲ್ಪ ಮೊತ್ತಕ್ಕೆ ಔಟಾದರು.
ಐದನೇ ವಿಕೆಟ್ಗೆ 98 ರನ್ ಜೊತೆಯಾಟ ನಡೆಸಿದ ರೆನ್ಶಾ ಹಾಗೂ ಗ್ರೀನ್ ತಂಡವನ್ನು ಆಧರಿಸಿದರು. ರೆನ್ ಶಾ ಔಟಾದ ನಂತರ ಗ್ರೀನ್ ಅವರು ಎಡ್ವರ್ಡ್ಸ್ರೊಂದಿಗೆ ಆರನೇ ವಿಕೆಟ್ಗೆ 42 ರನ್ ಸೇರಿಸಿದರೂ ಇದು ಆಸ್ಟ್ರೇಲಿಯ ತಂಡದ ಗೆಲುವಿಗೆ ಸಾಕಾಗಲಿಲ್ಲ.






