ನಾಳೆ ಭಾರತ-ಇಂಗ್ಲೆಂಡ್ 2ನೇ ಟಿ20 | ಮೊದಲ ಪಂದ್ಯ ಗೆದ್ದ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆತಿಥೇಯರು

PC : PTI
ಚೆನ್ನೈ: ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ ಟ್ವೆಂಟಿ20 ಸರಣಿಯ ಎರಡನೇ ಪಂದ್ಯ ಚೆನ್ನೈನ ಎಮ್.ಎ. ಚಿದಂಬರಮ್ ಸ್ಟೇಡಿಯಮ್ ನಲ್ಲಿ ಶನಿವಾರ ನಡೆಯಲಿದೆ. ಬುಧವಾರ ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಮೊದಲ ಪಂದ್ಯವನ್ನು ಭರ್ಜರಿ ಏಳು ವಿಕೆಟ್ಗಳಿಂದ ಗೆದ್ದ ಬಳಿಕ, ಅತ್ಯುತ್ತಮ ಲಹರಿಯಲ್ಲಿರುವ ಭಾರತೀಯ ಟಿ20 ತಂಡವು ಅಪಾರ ಆತ್ಮವಿಶ್ವಾಸದೊಂದಿಗೆ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ.
ಭಾರತವು ಈಗ ಐದು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುಂದಿದೆ.
ವೇಗಿ ಮುಹಮ್ಮದ್ ಶಮಿಯ ದೈಹಿಕ ಕ್ಷಮತೆಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆಯಾದರೂ, ಮೊದಲ ಪಂದ್ಯದ ಅಮೋಘ ವಿಜಯದ ಹಿನ್ನೆಲೆಯಲ್ಲಿ ಅದು ತಂಡವನ್ನು ಅಷ್ಟಾಗಿ ಕಾಡುವ ಸಾಧ್ಯತೆಗಳು ಇಲ್ಲ. ಆದರೆ, ಆಡುವ 11ರ ತಂಡದಲ್ಲಿ ಶಮಿಯನ್ನು ನೋಡಲು ಆತಿಥೇಯ ತಂಡವು ಖಂಡಿತವಾಗಿಯೂ ಬಯಸುತ್ತದೆ. ಅವರ ದೈಹಿಕ ಕ್ಷಮತೆಯ ವಿಶ್ಲೇಷಣೆ ನಡೆದ ಬಳಿಕವಷ್ಟೇ ಅವರ ಬಗ್ಗೆ ತಂಡಾಡಳಿತವು ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ.
34 ವರ್ಷದ ಶಮಿ ಮೊದಲ ಪಂದ್ಯದಲ್ಲೂ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿದ್ದರು. ಆದರೆ, ಅವರ ದೈಹಿಕ ಕ್ಷಮತೆಯ ಬಗ್ಗೆ ಸುದೀರ್ಘ ವಿಶ್ಲೇಷಣೆ ನಡೆಸಿದ ಬಳಿಕವಷ್ಟೇ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ತಂಡಾಡಳಿತವು ನಿರ್ಧರಿಸಿತು ಎನ್ನಲಾಗಿದೆ.
ಆದಾಗ್ಯೂ, ಮೊದಲ ಪಂದ್ಯದಲ್ಲಿ ಅವರ ಅನುಪಸ್ಥಿತಿಯು ಭಾರತವನ್ನು ಅಷ್ಟಾಗಿ ಕಾಡಲಿಲ್ಲ. ಅಲ್ಲಿ ವೇಗಿ ಅರ್ಶದೀಪ್ ಸಿಂಗ್ ಹೊಸ ಚೆಂಡಿನಲ್ಲಿ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಮಧ್ಯಮ ಹಂತದಲ್ಲಿ ಪ್ರವಾಸಿಗರ ಮೇಲೆ ನಿಯಂತ್ರಣ ಸಾಧಿಸಿದರು.
ಇನ್ನೊಂದೆಡೆ, ಭಾರತೀಯರಿಗೆ ಸವಾಲೊಡ್ಡಲು ಇಂಗ್ಲೆಂಡ್ ತನ್ನ ಅನುಭವಿ ಸ್ಪಿನ್ನರ್ ಗಳಾದ ಆದಿಲ್ ರಶೀದ್ ಮತ್ತು ಲಿಯಮ್ ಲಿವಿಂಗ್ಸ್ಟೋನ್ರಿಂದ ಉನ್ನತ ಮಟ್ಟದ ನಿರ್ವಹಣೆಯನ್ನು ಎದುರು ನೋಡುತ್ತಿದೆ. ಮೊದಲ ಪಂದ್ಯದಲ್ಲಿ, ಜೋಫ್ರಾ ಆರ್ಚರ್ ಹೊರತುಪಡಿಸಿ ಇಂಗ್ಲೆಂಡ್ನ ಯಾವುದೇ ಬೌಲರ್ಗಳಿಗೆ ಅಭಿಶೇಕ್ ಶರ್ಮಾರ ಆಕ್ರಮಣ ಮತ್ತು ಸಂಜು ಸ್ಯಾಮ್ಸನ್ರ ಅಬ್ಬರದ ಹೊಡೆತಗಳ ಪ್ರಹಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಟಿ20 ಪಂದ್ಯಗಳಲ್ಲಿ ಜೊತೆಗೂಡಿದ ಬಳಿಕ, ಅಭಿಶೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಹಲವು ಬಾರಿ ಭಾರತಕ್ಕೆ ಉತ್ತಮ ಆರಂಭಗಳನ್ನು ನೀಡಿದ್ದಾರೆ. ಅವರಿಬ್ಬರೂ ಸಿಡಿದದ್ದು ಕೆಲವೇ ಸಂದರ್ಭಗಳಲ್ಲಾದರೂ, ಅವರ ಪೈಕಿ ನಿರಂತರವಾಗಿ ಯಾರಾದರೊಬ್ಬರೂ ಉತ್ತಮ ನಿರ್ವಹಣೆ ನೀಡುತ್ತಾ ಬಂದಿದ್ದಾರೆ. ಕೋಲ್ಕತದಲ್ಲಿ, ಅಭಿಶೇಕ್ ಶರ್ಮಾ 230ಕ್ಕೂ ಅಧಿಕ ಸ್ಟ್ರೈಕ್ ರೇಟ್ ಮೂಲಕ ಇಂಗ್ಲೆಂಡ್ಗೆ ಆಘಾತ ನೀಡಿದರು.
ಜೊತೆಗೆ, ನಾಯಕ ಸೂರ್ಯಕುಮಾರ್ ಯಾದವ್ ರ ಫಾರ್ಮ್ ಬಗ್ಗೆಯೂ ಅಪಸ್ವರಗಳು ಎದ್ದಿವೆ. ಕಳೆದ ವರ್ಷದ ನಡೆದ ಟಿ20 ವಿಶ್ವಕಪ್ ಫೈನಲ್ ಬಳಿಕ ಅವರು 11 ಇನಿಂಗ್ಸ್ಗಳಲ್ಲಿ ಕೇವಲ ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ಕಳೆದ ಮೂರು ಪಂದ್ಯಗಳಲ್ಲಿ ಗಣನೀಯ ದೇಣಿಗೆಯನ್ನು ನೀಡಿಲ್ಲ. ಕೋಲ್ಕತದಲ್ಲಿ ಅವರು ಮೂರು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು.
ಎರಡನೇ ಪಂದ್ಯಕ್ಕೆ ಭಾರತವು ಹೆಚ್ಚಿನ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ. ಮುಹಮ್ಮದ್ ಶಮಿ ತಂಡಕ್ಕೆ ಮರಳುವ ದೈಹಿಕ ಕ್ಷಮತೆ ಹೊಂದಿದ್ದರೆ, ಅವರಿಗೆ ನಿತೀಶ್ ಕುಮಾರ್ ರೆಡ್ಡಿ ತನ್ನ ಸ್ಥಾನವನ್ನು ಬಿಟ್ಟುಕೊಡಬೇಕಾಗಬಹುದು.
ಇಂಗ್ಲೆಂಡ್ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಅದು ಬಲಗೈ ವೇಗಿ ಗಸ್ ಅಟ್ಕಿನ್ಸನ್ ರ ಬದಲಿಗೆ ಬಲವೈ ವೇಗಿ ಬ್ರೈಡನ್ ಕಾರ್ಸ್ರನ್ನು ತಂದಿದೆ. ಅದೂ ಅಲ್ಲದೆ, ಅದು 12 ಆಟಗಾರರ ತಂಡಕ್ಕೆ ಇನ್ನೋರ್ವ ವಿಕೆಟ್ಕೀಪರ್- ಜೇಮೀ ಸ್ಮಿತ್ರನ್ನು ಸೇರ್ಪಡೆಗೊಳಿಸಿದೆ. ಜಾಕೋಬ್ ಬೆತೆಲ್ ಕಾಯಿಲೆ ಬಿದ್ದಿರುವ ಹಿನ್ನೆಲೆಯಲ್ಲಿ ಈ ಸೇರ್ಪಡೆ ಮಾಡಲಾಗಿದೆ. ಬೆತೆಲ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ದರೆ ಜೇಮೀ ಸ್ಮಿತ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ತಂಡಗಳು
ಭಾರತ:
ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಶೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಮುಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಶಿಂಗ್ಟನ್ ಸುಂದರ್, ಧ್ರುವ ಜೂರೆಲ್ (ವಿಕೆಟ್ ಕೀಪರ್).
ಇಂಗ್ಲೆಂಡ್:
ಜೋಸ್ ಬಟ್ಲರ್ (ನಾಯಕ), ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೇಮೀ ಸ್ಮಿತ್ (ವಿಕೆಟ್ಕೀಪರ್), ಹ್ಯಾರಿ ಬ್ರೂಕ್, ಲಿಯಮ್ ಲಿವಿಂಗ್ಸ್ಟೋನ್, ಜಾಕೋಬ್ ಬೆತೆಲ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್.







